ತನ್ನ ತಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆಯಿಂದಾಗಿ ಸೃಷ್ಟಿಯಾಗಿರುವ ಶೂನ್ಯವನ್ನು ಭರ್ತಿಮಾಡುವುದು ಅತಿಕಷ್ಟಕರ ವಿಚಾರವಾದರೂ, ಹಂತಕರ ವಿರುದ್ಧ ನಮ್ಮ ಕುಟುಂಬವು 'ವೈಯಕ್ತಿಕ ದ್ವೇಷವನ್ನು' ಹೊಂದಿಲ್ಲ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ." ನಮ್ಮ ಕುಟುಂಬದ ಪರವಾಗಿ ಹೇಳುವುದಾದರೆ, ವೈಯಕ್ತಿಕ ನೋವಿಗಿಂತ ನಮಗೆ ರಾಜಕೀಯವು ಪ್ರತ್ಯೇಕವಾಗಿದೆ. ನಮಗಾರಿಗೂ ನನ್ನ ತಂದೆಯ ಹಂತಕರ ವಿರುದ್ಧ ವೈಯಕ್ತಿಕ ದ್ವೇಷವಿಲ್ಲ" ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.ರಾಜೀವ್ ಗಾಂಧಿ ಹತ್ಯಾ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಜೈಲಿನಲ್ಲಿರುವ ನಳಿನಿಯ ಭೇಟಿಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ, "ಅದು ವೈಯಕ್ತಿಕ ವಿಚಾರ. ನನಗೆ ಈ 'ಮುಕ್ತಾಯ' ಎಂಬ ಪದವು ನಂಗರ್ಥವಾಗುವುದಿಲ್ಲ. ನೀವು ಅತಿಯಾಗಿ ಪ್ರೀತಿಸುವವರನ್ನು ಕಳಕೊಂಡಾಗ ಅಲ್ಲಿ ಮುಕ್ತಾಯ ಎಂಬುದು ಇರುವುದಿಲ್ಲ" ಎಂದು ಅವರು ಮಾರ್ಮಿಕವಾಗಿ ನುಡಿದರು.ನಳಿನಿಯ ಭೇಟಿಯು, ನಿಮ್ಮ ತಂದೆಯ ಸಾವಿನ ವಿಚಾರದ ಮುಕ್ತಾಯವೆಂದೆನಿಸಲು ಸಹಾಯವಾಯಿತೇ ಎಂದು ಕೇಳಲಾದ ಪ್ರಶ್ನೆಗೆ ಅವರು ಮೇಲಿನಂತೆ ಉತ್ತರಿಸಿದರು.ತಾನು ನಳಿನಿಯೊಂದಿಗಿನ ಭೇಟಿಯಿಂದ ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡೆ ಎಂದೂ ಅವರು ನುಡಿದರು.ಪ್ರಿಯಾಂಕ ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ವೆಲ್ಲೂರು ಜೈಲಿನಲ್ಲಿರುವ ನಳಿನಿಯನ್ನು ಭೇಟಿಯಾಗಿದ್ದರು. ಬಳಿಕ ಈ ಭೇಟಿಯು ಸಂಪೂರ್ಣವಾಗಿ ವೈಯಕ್ತಿಕವಾದದ್ದು ಎಂದು ಹೇಳಿದ್ದರು.ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಎಲ್ಟಿಟಿಇಯು 1991ರ ಮೇ 21ರಂದು ತಮಿಳ್ನಾಡಿನ ಶ್ರೀಪೆರಂಬದೂರಿನಲ್ಲಿ ಹತ್ಯೆ ಮಾಡಿತ್ತು. |