ಶ್ರೀಲಂಕಾ ಮೂಲದ ಎಲ್ಟಿಟಿಇಯನ್ನು ಭಾರತ ಸರ್ಕಾರ ಉಗ್ರಗಾಮಿ ಸಂಘಟನೆ ಎಂದು ಪರಿಗಣಿಸುತ್ತದೆ ಮತ್ತು ಇದರ ಮುಖಂಡ ವಿ. ಪ್ರಭಾಕರನ್ ಒಬ್ಬ 'ಘೋಷಿತ ಅಪರಾಧಿ' ಎಂಬುದಾಗಿ ಪ್ರಧಾನಿ ಮನಮೋಹನ್ ಸಿಂಗ್ ಮಂಗಳವಾರ ಹೇಳಿದ್ದಾರೆ. ಪ್ರಭಾಕರನ್ ಒಬ್ಬ ಉಗ್ರನೆಂದು ತನಗನಿಸುವುದಿಲ್ಲ ಮತ್ತು ಎಲ್ಟಿಟಿಯು ಒಂದು ಸ್ವಾತಂತ್ರ್ಯ ಹೋರಾಟ ಸಂಘಟನೆಯಾಗಿ ಹುಟ್ಟಿಕೊಂಡಿದ್ದು, ಬಳಿಕ ಅದರಲ್ಲಿದ್ದ ಕೆಲವರು ಉಗ್ರರಾಗಿ ಬದಲಾಗಿದ್ದರು ಎಂಬುದಾಗಿ ತಮಿಳ್ನಾಡು ಮುಖ್ಯಮಂತ್ರಿ ಕರುಣಾನಿಧಿ ವಿವಾದಾಸ್ಪದ ಹೇಳಿಕೆ ನೀಡಿರುವ ಬೆನ್ನಿಗೆ ಪ್ರಧಾನಿಯವರ ಈ ಹೇಳಿಕೆ ಹೊರಬಿದ್ದಿದೆ.
"ಎಲ್ಟಿಟಿಇ ಒಂದು ಉಗ್ರಗಾಮಿ ಸಂಘಟನೆ ಎಂಬ ನಮ್ಮ ನಿಲುವಿನ ಕುರಿತು ಕಾಂಗ್ರೆಸ್ ವಕ್ತಾರರು ಕೆಲವು ದಿನಗಳ ಹಿಂದೆ ಸ್ಪಷ್ಟಪಡಿಸಿದ್ದಾರೆ. ಪ್ರಭಾಕರನ್ ಒಬ್ಬ ಘೋಷಿತ ಅಪರಾಧಿ. ಹಾಗಾಗಿ ಸರ್ಕಾರಕ್ಕೆ ಸಂಬಂಧಿಸಿದಂತೆ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ" ಎಂದು ಅವರು ಖಾಸಗಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.
ಪ್ರಭಾಕರ್ ಉಗ್ರನಲ್ಲ ಎಂಬ ಕರುಣಾನಿಧಿಯವರ ವಿವಾದಾಸ್ಪದ ಹೇಳಿಕೆಯ ಕುರಿತು ಕೇಳಲಾದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು. ಅದಾಗ್ಯೂ, ಕರುಣಾನಿಧಿ ತನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದ್ದು, ತಾನು ಹೇಳಿಕೆಯು, ಆ ಅರ್ಥವನ್ನು ಧ್ವನಿಸುತ್ತಿರಲಿಲ್ಲ ಎಂದು ಬಳಿಕ ಸ್ಪಷ್ಟೀಕರಣ ನೀಡಿದ್ದರು.
ತಮಿಳ್ನಾಡು ಮುಖ್ಯಮಂತ್ರಿ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪ್ರಧಾನಿ ನುಡಿದರು. ಇಂತಹ ಹೇಳಿಕೆಗಳು ಚುನಾವಣೋತ್ತರ ಮೈತ್ರಿಯಮೇಲೆ ಪರಿಣಾಮ ಬೀರಬಹುದೇ ಎಂಬುದಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು "ಇಲ್ಲವೆಂದು ಭಾವಿಸುತ್ತೇನೆ, ಆದರೆ ಈ ಅನಿಶ್ಚಿತತೆಯ ಕಾಲದಲ್ಲಿ ಯಾವುದನ್ನೂ ತಳ್ಳಿಹಾಕಲಾಗುವುದಿಲ್ಲ" ಎಂದು ಡಾ| ಸಿಂಗ್ ನುಡಿದರು. |