ತನಗೆ ಮಂಗಳವಾರ ದೂರವಾಣಿ ಕರೆ ನೀಡಿರುವ ಆರ್‌ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಅವರು, ತಾನಿನ್ನೂ ಯುಪಿಎಯಲ್ಲೇ ಇರುವುದಾಗಿ ಸ್ಪಷ್ಟಪಡಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಪ್ರಣಬ್ ಮುಖರ್ಜಿ ಹೇಳಿದ್ದಾರೆ.ಈ ಇಬ್ಬರೂ ಚುನಾವಣಾ ಪ್ರಚಾರ ಸಭೆಗಳಲ್ಲಿ ಪರಸ್ಪರ ಆರೋಪ, ಪ್ರತ್ಯಾರೋಪಗಳಿಗೆ ಮುಂದಾಗಿದ್ದರು. ಮುಂದಿನ ಯುಪಿಎ ಸರ್ಕಾರದಲ್ಲಿ ಲಾಲೂ ಪ್ರಸಾದ್‌ಗೆ ಜಾಗವಿಲ್ಲ ಎಂದು ಪ್ರಣಬ್ ಹೇಳಿದ್ದರು. ಅಲ್ಲದೆ, ಕಾಂಗ್ರೆಸ್ ಪಕ್ಷವನ್ನು ಕಡೆಗಣಿಸುತ್ತಿರುವ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಇದರ ಪರಿಣಾಮವನ್ನು ಎದುರಿಸಲು ತಯಾರಿರಬೇಕೆಂದು ಚುಚ್ಚಿದ್ದು, ಬಿಹಾರದಲ್ಲಿ ಲಾಲು ಸರಕಾರವನ್ನು ವಜಾ ಮಾಡಲು ಎನ್‌ಡಿಎ ಸರಕಾರ ಒಂದು ಕಾಲದಲ್ಲಿ ಸಿದ್ಧತೆ ನಡೆಸಿದ್ದಾಗ ಕಾಂಗ್ರೆಸ್ ಹೊರತುಪಡಿಸಿ ಬೇರೆ ಯಾವುದೇ ಪಕ್ಷ ಲಾಲು ನೆರವಿಗೆ ಬಂದಿರಲಿಲ್ಲವೆಂದು ನೆನಪಿಸಿದ್ದರು.ಅಲ್ಲದೆ ಲಾಲೂ ಅವರನ್ನು ಅವಕಾಶವಾಗಿ ಎಂಬರ್ಥದಲ್ಲಿ ಟೀಕಿಸಿದ್ದ ಪ್ರಣಬ್, ಲಾಲು ಕಾಂಗ್ರೆಸ್ ಪಕ್ಷವನ್ನು ಕಾರ್ಪೆಟ್ ತರ ಬಳಸಿಕೊಳ್ಳುತ್ತಿದ್ದು, ಇನ್ನು ಮುಂದೆ ಅವರನ್ನು ಮೈತ್ರಿ ಕೂಟದಲ್ಲಿ ಇರಿಸಿಕೊಳ್ಳುವುದು ಕಷ್ಟಕರ ಎಂದು ಬಿಹಾರದ ಸಮಷ್ಟಿಪುರದ ಸಮಾವೇಶದಲ್ಲಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಲಾಲೂ, 'ಯಾರು ಯಾರೊಂದಿಗಿದ್ದಾರೆ ಎಂಬುದನ್ನು ಕಾಲವೇ ತಿಳಿಸುತ್ತದೆ' ಎಂದು ತಿರುಗೇಟು ನೀಡಿದ್ದರು. ಇದಲ್ಲದೆ, ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಎಂದು ಕಾಂಗ್ರೆಸ್ ಬಿಂಬಿಸಿರುವುದಕ್ಕೆ ವಿರೋಧವಾಗಿ ನಡೆದುಕೊಳ್ಳುತ್ತಿರುವ ಲಾಲೂ, ಚುನಾವಣಾ ಬಳಿಕ ಮಿತ್ರ ಪಕ್ಷಗಳು ಪ್ರಧಾನಿಯನ್ನು ಆಯ್ಕೆ ಮಾಡಲಿದ್ದಾರೆ ಎಂದೂ ಹೇಳಿದ್ದರು.ಏತನ್ಮಧ್ಯೆ, ಕೇಂದ್ರದಲ್ಲಿ ಸರ್ಕಾರ ರಚಿಸುವಲ್ಲಿ ತಾನು ಕಾಂಗ್ರೆಸ್‌ನೊಂದಿಗೆ ಇರುವುದಾಗಿ ಲಾಲೂ ಹೇಳಿದ್ದಾರೆ ಎಂದು ಮಂಗಳವಾರ ರಾತ್ರಿ ಪ್ರಣಬ್ ತಿಳಿಸಿದ್ದಾರೆ. "ನಾನು ಯುಪಿಎ ತೊರೆದಿಲ್ಲ. ನಾನು ಯುಪಿಎಯಲ್ಲೇ ಇದ್ದೇನೆ ಮತ್ತು ನಾವು ಇನ್ನೊಮ್ಮೆ ಸರ್ಕಾರ ರಚಿಸುತ್ತೇವೆ" ಎಂದು ದೂರವಾಣಿ ಕರೆ ನೀಡಿದ ಲಾಲೂ ಹೇಳಿದರೆಂದು ಪ್ರಣಬ್ ತಿಳಿಸಿದ್ದಾರೆ. |