ಜಾರ್ಖಂಡ್‌ನ ಲಟೇಹರ್ ಜಿಲ್ಲೆಯಲ್ಲಿ ಪ್ರಯಾಣಿಕ ರೈಲನ್ನು ಹೈಜಾಕ್ ಮಾಡಿದ್ದ ನಕ್ಸಲರು ರೈಲು ಬಿಟ್ಟು ಪರಾರಿಯಾಗಿರುವ ಕಾರಣ ರೈಲು ಒತ್ತೆ ಪ್ರಕರಣವು ಸುಖಾಂತ್ಯವಾಗಿದ್ದು, ಸಾವಿರಕ್ಕಿಂತಲೂ ಅಧಿಕ ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ. ಎರಡನೇ ಹಂತದ ಚುನಾವಣೆಯ ಮುನ್ನಾದಿನವಾದ ಬುಧವಾರ ಸಾವಿರಕ್ಕಿಂತಲೂ ಅಧಿಕ ಮಂದಿ ಪ್ರಯಾಣಿಕರಿದ್ದ ರೈಲಿಗೆ 200ಕ್ಕಿಂತಲೂ ಅಧಿಕ ಮಂದಿಯ ನಕ್ಸಲರ ತಂಡವು ಮುತ್ತಿಗೆ ಹಾಕಿ ವಶಪಡಿಸಿಕೊಂಡಿದ್ದು, ಮೂರು ಗಂಟೆಯ ಪ್ರಹಸನದ ಬಳಿಕ ರೈಲನ್ನು ಬಿಟ್ಟು ತೊರೆದಿದ್ದಾರೆ.
ಘಟನೆಯ ಹಿನ್ನೆಲೆ ಸುಮಾರು 700ರಿಂದ 800 ಮಂದಿ ಪ್ರಯಾಣಿಸುತ್ತಿದ್ದ ಪ್ರಯಾಣಿರ ರೈಲನ್ನು ಅಡ್ಡಗಟ್ಟಿರುವ 200ಕ್ಕಿಂತಲೂ ಅಧಿಕ ಶಸ್ತ್ರಸಜ್ಜಿತ ನಕ್ಸಲರು ರೈಲನ್ನು ಒತ್ತೆ ಇರಿಸಿಕೊಂಡಿರುವ ದುರ್ಘಟನೆ ಜಾರ್ಖಂಡ್‌ನ ಲಟೇಹರ್ ಜಿಲ್ಲೆಯಲ್ಲಿ ಎರಡನೇ ಹಂತದ ಚುನಾವಣೆಯ ಮುನ್ನಾದಿನವಾದ ಬುಧವಾರ ಸಂಭವಿಸಿದೆ.
ಬಾರಕಾನ ಎಂಬಲ್ಲಿಂದ ಮುಗಲ್‌ಸರಾಯ್‌ಗೆ ರೈಲು ತೆರಳುತ್ತಿದ್ದು ಮುಂಜಾನೆ 6.30ರ ವೇಳೆಗೆ ಹಿಲ್ಲ್‌ಗರ್ ನಿಲ್ದಾಣದಲ್ಲಿ ಮಾವೋವಾದಿ ಉಗ್ರರು ದಾಳಿ ನಡೆಸಿದ್ದಾರೆ. ಈ ಘಟನೆಯನ್ನು ದೃಢಪಡಿಸಿರುವ ದನಾಬಾದ್ ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ ಪಿ.ಆರ್. ದಾಸ್ ಅವರು "ಹೌದು, ರೈಲನ್ನು ನಕ್ಸಲರು ಮುಂಜಾನೆ ಸುಮಾರು 6.33ರ ವೇಳೆಗೆ ಒತ್ತೆಯಿರಿಸಿಕೊಂಡಿದ್ದಾರೆ. ಎಲ್ಲಾ ಪ್ರಯಾಣಿಕರು ಸರಕ್ಷಿತರಾಗಿದ್ದಾರೆ" ಎಂದು ಹೇಳಿದ್ದಾರೆ. ರೈಲನ್ನು ಉಗ್ರರಿಂದ ಬಿಡಿಸಿಕೊಳ್ಳು ಪ್ರಯತ್ನ ನಡೆದಿದ್ದು, ಮುಖ್ಯ ಕಾರ್ಯದರ್ಶಿ ಅವರು ಡಿಜಿಪಿ ಹಾಗೂ ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಸಿದ್ದಾರೆ.
ಪ್ರಯಾಣಿಕರನ್ನು ಆದಷ್ಟು ಬೇಗ ಸುರಕ್ಷಿತವಾಗಿ ಬಿಡುಗಡೆಗೊಳಿಸುವ ಭರವಸೆ ಹೊಂದಿದ್ದಾರೆ. ನಕ್ಸಲರು ಯಾವುದೇ ಬೇಡಿಕೆಯನ್ನು ಮುಂದಿರಿಸಿದ್ದಾರೆಯೇ ಎಂಬುದು ತಿಳಿದಿಲ್ಲ, ಏನಾದರೂ ಬೇಡಿಕೆಗಳಿದ್ದರೆ, ಅದನ್ನು ಸರ್ಕಾರಕ್ಕೆ ತಿಳಿಸಲಾಗುವುದು ಎಂದು ವಕ್ತಾರರು ಹೇಳಿದ್ದಾರೆ.
ಚುನಾವಣೆಗಳಿಗೆ ಅಡ್ಡಿಯುಂಟುಮಾಡಲು ಸೂಕ್ತ ಯೋಜನೆಯೊಂದಿಗೆ ದಾಳಿ ನಡೆಸಲಾಗಿದೆ. ರೈಲಿಗೆ ನಾಲ್ಕೂ ಬದಿಯಿಂದಲೂ ಮುತ್ತಿಗೆ ಹಾಕಿದ ಉಗ್ರರು ರೈಲನ್ನು ವಶಪಡಿಸಿಕೊಂಡಿದ್ದಾರೆ. ನಕ್ಸಲರ ಇನ್ನೊಂದು ಗುಂಪು ಉತಾರಿ ರಸ್ತೆ ರೈಲು ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸಿದ್ದು ಪಲಮಾವು ಜಿಲ್ಲೆಯಲ್ಲಿ ರೈಲ್ವೇ ಹಳಿಯೊಂದನ್ನು ಧ್ವಂಸ ಮಾಡಿದ್ದಾರೆ.
ಇದೇ ವೇಳೆ ಮಂಗಳವಾರ ರಾತ್ರಿ ಒಂದು ಶಾಲೆ ಮತ್ತು ಆರೋಗ್ಯ ಕೇಂದ್ರವನ್ನೂ ಸ್ಫೋಟಿಸಿದ್ದಾರೆ. ಕಳೆದ ಎರಡು ವಾರದಿಂದ ಒಂಬತ್ತು ಶಾಲೆಗಳು ಸೇರಿದಂತೆ 18 ಸರ್ಕಾರಿ ಕಟ್ಟಡಗಳು ನಕ್ಸಲರ ಹಿಂಸೆಗೆ ಬಲಿಯಾಗಿವೆ.
ಇದೇ ವೇಳೆ ನಕ್ಸಲರು 48 ಗಂಟೆಯ ಬಂದ್‌ಗೆ ಕರೆ ನೀಡಿದ್ದಾರೆ. ರಾಜ್ಯದ 24 ಜಿಲ್ಲೆಗಳಲ್ಲಿ 18 ಜಿಲ್ಲೆಗಳು ನಕ್ಸಲ್ ಪೀಡಿತವಾಗಿವೆ. ರಾಜ್ಯದಲ್ಲಿ ನಕ್ಸಲ್ ಹಿಂಸಾಚಾರದಿಂದಾಗಿ ಕಳೆದ ಎಂಟು ವರ್ಷಗಳಿಂದ ಸುಮಾರು 1,500 ಮಂದಿ ಹತರಾಗಿದ್ದಾರೆ. |