ಉತ್ತರಪ್ರದೇಶ ಮುಖ್ಯಮಂತ್ರಿ ಮಾಯಾವತಿ ವಿರುದ್ಧ ಸಿಬಿಐ ಬಳಸುವುದಾಗಿ ಬೆದರಿಕೆ ಹಾಕಿ ಚುನಾವಣಾ ನೀತಿಸಂಹಿತೆ ಉಲ್ಲಂಘಿಸಿದ್ದಾರೆ ಎಂಬ ಆರೋಪಕ್ಕೆ ಒಳಗಾಗಿರುವ ಕಾಂಗ್ರೆಸ್ ನಾಯಕ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
"ಜಿಲ್ಲಾಡಳಿತದ ನಿರ್ದೇಶನದ ಪ್ರಕಾರ, ಮಂಗಳವಾರ ರಾತ್ರಿ ದಿಗ್ವಿಜಯ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ" ಎಂದು ಹರ್ದೋಯಿ ಡಿಎಸ್ಪಿ ಬಿ.ಬಿ. ಚೌರಾಸಿಯಾ ತಿಳಿಸಿದ್ದಾರೆ.
ಹರ್ದೋಯಿ ಜಿಲ್ಲೆಯ ಮಲ್ವಾನ್ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಸಮಾವೇಶ ಒಂದರಲ್ಲಿ ಭಾಷಣ ಮಾಡುತ್ತಿದ್ದ ದಿಗ್ವಿಜಯ್ ಸಿಂಗ್, ಉತ್ತರಪ್ರದೇಶ ಸರ್ಕಾರವು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ದೌರ್ಜನ್ಯ ನಿಲ್ಲಿಸದೇ ಇದ್ದರೆ ಕೇಂದ್ರ ಸರ್ಕಾರವು ಅವರ ವಿರುದ್ಧ ಸಿಬಿಐಯನ್ನು 'ಬಳಸಲಿದೆ' ಎಂಬುದಾಗಿ ಹೇಳಿದ್ದಾರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದಿಗ್ವಿಜಯ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. |