ದಿನೇದಿನೇ ಹೆಚ್ಚುತ್ತಿರುವ ಬಿಸಿಲಿನ ಝಳ ರಾಷ್ಟ್ರಾದ್ಯಂತ ಜನತೆ ಬವಣೆ ಪಡುವಂತಾಗಿದೆ. ನಾಗ್ಪುರದಲ್ಲಿ ಗರಿಷ್ಠ ತಾಪಮಾನ 41 ಡಿಗ್ರಿ ಸೆಲ್ಷಿಯಸ್ ತಲುಪಿದ್ದು, ಉರಿಉರಿ ಬಿಸಿಲ ಬೇಗೆ ತಡೆಯಲಾರದ ಜನತೆ ಪರಿತಪಿಸುವಂತಾಗಿದೆ.
ಉರಿಬಿಸಿಲು ಜನತೆಯ ದಾಹ ಹೆಚ್ಚಿಸುತ್ತಿದ್ದು, ಕಬ್ಬಿನ ಹಾಲು, ಮಜ್ಜಿಗೆ, ಹಣ್ಣಿನ ರಸ ಅಥವಾ ಇತರ ತಂಪು ಪಾನೀಯಗಳಿಗೆ ಮೊರೆ ಹೋಗಿದ್ದಾರೆ.
ಬಿಸಿಲಿನಲ್ಲಿ ಮನೆಯಿಂದ ಹೊರಗೆ ಓಡಾಡುವವರ ಗೋಳು ಹೇಳತೀರದು. ಮನೆಯೊಳಗಿರುವ ಜನಸಾಮಾನ್ಯರಿಗೂ ಬಿಸಿಲಿನ ಬಿಸಿ ತಟ್ಟುತ್ತಿದೆ.
"ಬೆಳಿಗ್ಗಿನ ಹೊತ್ತಿಗೆ ವಿಪರೀತ ಬಿಸಿಲಿದ್ದು ಮಧ್ಯಾಹ್ನದಂತೆ ಭಾಸವಾಗುತ್ತಿದೆ. ಹೆಚ್ಚಿನ ತಾಪಮಾನದಿಂದಾಗಿ ಜನರಿಗೆ ಬೀದಿಯಲ್ಲಿ ಓಡಾಡುವುದೂ ಕಷ್ಟವಾಗಿದೆ. ಇದರಿಂದಾಗಿ ಏನನ್ನೂ ತಿನ್ನುವುದೂ ಬೇಡವೆಂದೆನಿಸುತ್ತದೆ" ಎಂದು ನಾಗ್ಪುರದ ನಿವಾಸಿ ಧನರಾಜ್ ಜೈನ್ ಹೇಳುತ್ತಾರೆ.
ರಾಯ್ಪುರ, ಚೆನ್ನೈ ಹಾಗೂ ಕಡಲತೀರದ ಪ್ರದೇಶಗಳ ಜನತೆಗೂ ಬಿಸಿಲು ತಡೆದುಕೊಳ್ಳಲಾಗುತ್ತಿಲ್ಲ.
ಹವಾಮಾನ ಇಲಾಖೆಯ ಪ್ರಕಾರ ತಾಪಮಾನ ಹೆಚ್ಚುತ್ತಲೇ ಹೋಗುತ್ತಿದೆ. ತಾಪಮಾನವು 45 ಡಿಗ್ರಿ ಸೆಲ್ಷಿಯಸ್ ದಾಟುವ ಸಂಭವ ಇದೆ ಎಂದು ರಾಯ್ಪುರ ಮೂಲದ ಹವಾಮಾನ ಇಲಾಖೆಯ ನಿರ್ದೇಶಕ ಎಂ.ಎಲ್. ಸಾಹು ಹೇಳುತ್ತಾರೆ.
ಸಾಮಾನ್ಯವಾಗಿ ಮೇ-ಜೂನ್ ತಿಂಗಳಲ್ಲಿ ತಾಪಮಾನ ಏರಿದರೆ, ಈ ವರ್ಷ ಎಪ್ರಿಲ್‌ನಲ್ಲಿ ತಾಪಮಾನ 40ಡಿಗ್ರಿ ದಾಟಿದೆ. |