ಲೋಕಸಭಾ ಚುನಾವಣೆಯ ದ್ವಿತೀಯ ಹಂತದ ಮತದಾನವು ಎಪ್ರಿಲ್ 23ರಂದು ಕರ್ನಾಟಕ ಸೇರಿದಂತೆ 12 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯಲಿದ್ದು 140 ಸಂಸದರ ಆಯ್ಕೆ ನಡೆಯಲಿದೆ. ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ, ವೀರಪ್ಪ ಮೊಯ್ಲಿ, ಧರ್ಮ ಸಿಂಗ್ ಹಾಗೂ ಘಟಾನುಘಟಿಗಳಾದ ಅನಂತ ಕುಮಾರ್, ಮಲ್ಲಿಕಾರ್ಜುನ ಖರ್ಗೆ ಅವರುಗಳ ಕ್ಷೇತ್ರಗಳಲ್ಲೂ ಮತದಾನ ನಡೆಯಲಿದೆ. ರಾಹುಲ್ ಗಾಂಧಿ, ಶರದ್ ಪವಾರ್, ಜಾರ್ಜ್ ಫರ್ನಾಂಡಿಸ್, ರಾಮವಿಲಾಸ್ ಪಾಸ್ವಾನ್ ಮತ್ತು ಸುಷ್ಮಾ ಸ್ವರಾಜ್ ಸೇರಿದಂತೆ ಅನೇಕ ಪ್ರಮುಖ ನಾಯಕರ ಹಣೆಬರಹ ನಿರ್ಧಾರವಾಗಲಿದೆ.
ಮಣಿಪುರದ ಒಂದು ಲೋಕಸಭಾ ಕ್ಷೇತ್ರದ ಚುನಾವಣೆ ಬುಧವಾರ ನಡೆಯುತ್ತಿದ್ದು ಇದನ್ನು ದ್ವಿತೀಯ ಹಂತದ ಚುನಾವಣೆಯ ಭಾಗವೆಂದು ಪರಿಗಣಿಸಲಾಗಿದೆ. ದ್ವಿತೀಯ ಹಂತದಲ್ಲಿ ಆಂಧ್ರ ಪ್ರದೇಶ ಹಾಗೂ ಒರಿಸ್ಸಾಗಳಲ್ಲಿನ ವಿಧಾನ ಸಭಾ ಚುನಾವಣೆಗಳೂ ಅಂತ್ಯಗೊಳ್ಳಲಿವೆ.
ಎಪ್ರಿಲ್ 16ರಂದು ನಡೆದ ಚುನಾವಣೆಯಲ್ಲಿ ನಕ್ಸಲ್ ಪೀಡಿದ ನಾಲ್ಕು ರಾಜ್ಯಗಳಲ್ಲಿ ವ್ಯಾಪಕ ಹಿಂಸಾಚಾರ ನಡೆದಿದ್ದು 19 ಮಂದಿ ಸಾವನ್ನಪ್ಪಿದ್ದರು.
ತಾನೇ ಕಟ್ಟಿ ಬೆಳೆಸಿದ ಪಕ್ಷದಿಂದ ಟಿಕೆಟ್ ಪಡೆಯಲು ವಿಫಲವಾಗಿರುವ ಎನ್‌ಡಿಎ ಸಂಚಾಲಕ ಜಾರ್ಜ್ ಫರ್ನಾಂಡಿಸ್ ಅವರು ಮುಜಾಫರಾಪುರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
ಧರ್ಮಸಿಂಗ್ ಅವರು ಬೀದರ್ ಕ್ಷೇತ್ರದಿಂದ ಸ್ಫರ್ಧಿಸುತ್ತಿದ್ದರೆ, ಖರ್ಗೆ ಅವರು ಗುಲ್ಬರ್ಗಾದಿಂದ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಕುಮಾರಸ್ವಾಮಿ ಬೆಂಗಳೂರು ಗ್ರಾಮಾಂತರ, ವೀರಪ್ಪ ಮೊಯ್ಲಿ ಚಿಕ್ಕಬಳ್ಳಾಪುರದಲ್ಲಿ ಹಣಾಹಣಿಗಿಳಿದಿದ್ದಾರೆ. ಬಿಜೆಪಿಯ ಅನಂತ್ ಕುಮಾರ್ ಮತ್ತು ಕೃಷ್ಣಭೈರೇ ಗೌಡ ಅವರುಗಳು ಬೆಂಗಳೂರು ದಕ್ಷಿಣದಲ್ಲಿ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಉತ್ತರ ಪ್ರದೇಶದ ಅಮೇಠಿಯಿಂದ ನೆಹರೂ ಕುಟುಂಬದ ಕುಡಿ ರಾಹುಲ್ ಗಾಂಧಿ ಆಯ್ಕೆ ಬಯಸಿದ್ದಾರೆ. ಮಹಾರಾಷ್ಟ್ರದ ಮಾಧಾದಿಂದ ಪವಾರ್, ಮಧ್ಯಪ್ರದೇಶದ ವಿದಿಶಾದಿಂದ ಸುಷ್ಮಾ ಸ್ವರಾಜ್ ಹಾಗೂ ಬಿಹಾರದ ಹಾಜಿಪುರದಿಂದ ಪಾಸ್ವಾನ್ ಕಣಕ್ಕಿಳಿದಿದ್ದಾರೆ.
ಮೊದಲ ಹಂತದಂತೆ ದ್ವಿತೀಯ ಹಂತದ ಪ್ರಚಾರವೂ ಶಾಂತಿಯುತವಾಗಿತ್ತು. ಆದರೆ ವಾಗ್ಯುದ್ಧಗಳಿಗೆ ಕೊರತೆ ಇರಲಿಲ್ಲ. ನಾಯಕರು ತಮ್ಮ ವಿರೋಧ ಪಕ್ಷಗಳ ನಾಯಕನ್ನು ಕೆಲವೊಮ್ಮೆ ತಮ್ಮದೇ ಪಕ್ಷಗಳ ನಾಯಕರನ್ನೂ ತರಾಟೆಗೆ ತೆಗೆದುಕೊಂಡಿದ್ದರು.
ಎರಡನೆಯ ಹಂತದಲ್ಲಿ 121 ಮಹಿಳೆಯರು ಸೇರಿದಂತೆ 2,041 ಅಭ್ಯರ್ಥಿಗಳು ತಮ್ಮ ಅದೃಷ್ಟವನ್ನು ಪರೀಕ್ಷೆಗೊಡ್ಡಿಕೊಂಡಿದ್ದಾರೆ. ಆಂಧ್ರಪ್ರದೇಶದ 20, ಅಸ್ಸಾಮಿನ 11, ಬಿಹಾರದ 12, ಗೋವಾದ ಎರಡು, ಜಮ್ಮು ಕಾಶ್ಮೀರದ ಒಂದು, ಕರ್ನಾಟಕದ 17, ಮಧ್ಯಪ್ರದೇಶದ 13, ಮಹಾರಾಷ್ಟ್ರದ 25, ಒರಿಸ್ಸಾದ 11, ತ್ರಿಪುರಾದ ಎರಡು, ಉತ್ತರಪ್ರದೇಶದ 17 ಮತ್ತು ಜಾರ್ಖಂಡ್‌ನ ಎಂಟು ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ಎರಡನೆ ಹಂತದ ಅಂತ್ಯದಲ್ಲಿ ಒಟ್ಟು 265 ಸ್ಥಾನಗಳಲ್ಲಿ ಮತದಾನ ಪೂರ್ಣಗೊಳ್ಳುತ್ತಿದೆ. ಉಳಿದ ಸ್ಥಾನಗಳಿಗೆ ಮುಂದಿನ ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ. 545 ಸ್ಥಾನಗಳಲ್ಲಿ 543 ಸ್ಥಾನಗಳಲ್ಲಿ ಚುನಾವಣೆ ನಡೆಯಲಿದ್ದು, ಉಳಿದೆರಡು ಸ್ಥಾನಗಳಿಗೆ ಆಂಗ್ಲೋಇಂಡಿಯನ್ ಸಮುದಾಯದಿಂದ ನಾಮನಿರ್ದೇಶನ ನಡೆಯಲಿದೆ.
ಆಂಧ್ರದ 140 ಹಾಗೂ ಒರಿಸ್ಸಾದ 77 ವಿಧಾನಸಭಾ ಸ್ಥಾನಗಳಿಗೂ ಚುನಾವಣೆ ನಡೆಯಲಿದ್ದು, ವಿಧಾನಸಭಾ ಚುನಾವಣೆ ಪೂರ್ಣಗೊಳ್ಳಲಿದೆ. ಆಂಧ್ರದಲ್ಲಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ್ ರೆಡ್ಡಿ ಅವರ ವೈರಿ ಚಂದ್ರಬಾಬು ನಾಯ್ಡು ಹಾಗೂ ಪ್ರಜಾರಾಜ್ಯಂ ಸಂಸ್ಥಾಪಕ ಚಿತ್ರತಾರೆ ಚಿರಂಜೀವಿ ಅವರುಗಳು ಕಣದಲ್ಲಿದ್ದಾರೆ. ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರೂ ತೃತೀಯ ಬಾರಿಗೆ ಆಯ್ಕೆ ಬಯಸಿದ್ದಾರೆ.
ಮುಂಜಾನೆ ಏಳು ಗಂಟೆಗೆ ಮತದಾನ ಆರಂಭವಾಗಲಿದ್ದು, ಸಾಯಂಕಾಲ ಐದು ಗಂಟೆಗೆ ಅಂತ್ಯಗೊಳ್ಳಲಿದೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಅಪರಾಹ್ನ ಮೂರುಗಂಟೆಗೇ ಕೊನೆಗೊಳ್ಳುವುದು.
ಎಲ್ಲಾ ಮತಗಟ್ಟೆಗಳಲ್ಲೂ ಮತಯಂತ್ರ ಬಳಸಲಾಗುವುದು. ಮತಯಂತ್ರವನ್ನು ಪ್ರಥಮವಾಗಿ 1982ರಲ್ಲಿ ಕೇರಳದಲ್ಲಿ ಬಳಸಲಾಗಿತ್ತು. |