ಮುಸ್ಲಿಮರ ವಿರುದ್ಧ ಹಗೆನುಡಿಗಳನ್ನಾಡಿರುವ ಆರೋಪದ ಹಿನ್ನೆಲೆಯಲ್ಲಿ ಜೈಲುವಾಸಿಯಾಗಿದ್ದು, ಪ್ರಸಕ್ತ ಪೆರೋಲ್ ಮೇಲೆ ಬಿಡುಗಡೆಯಾಗಿರುವ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ತನ್ನ ಪಿಲಿಭಿತ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.
ಬಿಜೆಪಿಯಲ್ಲಿ ಉದ್ಭವವಾಗಿರುವ ಇನ್ನೋರ್ವ ಹಿಂದುತ್ವ ಪೋಸ್ಟಬಾಯ್ ಆಗಿರುವ 29ರ ಹರೆಯದ ವರುಣ್ ಗಾಂಧಿ ಅವರೊಂದಿಗೆ ತಾಯಿ ಮನೇಕಾ ಗಾಂಧಿ ಹಾಗೂ ಪಕ್ಷದ ಇತರ ನಾಯಕರು ಉಪಸ್ಥಿತರಿದ್ದರು. ಪಿಲಿಭಿತ್‌ನಲ್ಲಿ ಕೊನೆಯ ಹಂತವಾದ ಮೇ 13ರಂದು ಮತದಾನ ನಡೆಯಲಿದೆ.
ಪಿಲಿಭಿತ್ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ದೊಡ್ಡ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮಾಧ್ಯಮ ಪ್ರತಿನಿಧಿಗಳು ಜಮಾಯಿಸಿದ್ದರು. ವರುಣ್ ಇಲ್ಲಿ ತನ್ನ ಸೋದರ ಸಂಬಂಧಿ ಹಾಗೂ ಕಾಂಗ್ರೆಸ್ ನಾಯಕ ಪಿ.ಎಂ. ಸಿಂಗ್ ವಿರುದ್ಧ ಸ್ಫರ್ಧಿಸುತ್ತಿದ್ದಾರೆ.
ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಅತ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಅವರು ನಾಮಪತ್ರ ಸಲ್ಲಿಸಲು ತೆರಳುವ ವೇಳೆಗೆ ಮೆರವಣಿಗೆಯಲ್ಲಿ ಸಾಗಲು ಅವರ ಬೆಂಬಲಿಗರಿಗೆ ಜಿಲ್ಲಾಡಳಿತ ಅವಕಾಶ ನೀಡಲಿಲ್ಲ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮೊಮ್ಮಗ ಹಾಗೂ ಸಂಜಯ್ ಗಾಂಧಿ ಪುತ್ರನಾಗಿರುವ ವರುಣ್ ಚೊಚ್ಚಲ ಆಯ್ಕೆ ಬಯಸಿದ್ದಾರೆ.
ನಾಮಪತ್ರ ಸಲ್ಲಿಸುವ ಮುನ್ನ ನವಾಬ್‌ಗಂಜ್‌ನಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ವರುಣ್, 'ಅಹಿಂಸೆಯೇ ನನ್ನ ಧರ್ಮವಾಗಿದೆ' ಎಂದು ನುಡಿದರು. ಅಲ್ಲದೆ ತನ್ನ ರಾಷ್ಟ್ರವು ಇತರರನ್ನು ಗೌರವಿಸಿ ಪ್ರೀತಿಸುವುದನ್ನು ಕಲಿಸಿದೆ ಎಂದು ನುಡಿದರು.
ಇತರ ಅಭ್ಯರ್ಥಿಗಳು ಹಣದ ಬಲದಿಂದ ಸ್ಫರ್ಧಿಸುತ್ತಿದ್ದರೆ ತಾನು ಜನಬಲದೊಂದಿಗೆ ಸ್ಫರ್ಧಿಸುತ್ತಿದ್ದೇನೆ ಎಂದು ನುಡಿದರು. ಏನೇ ಬಂದರೂ ನಾನು ನಿಮ್ಮೊಂದಿಗೆ ಬಂಡೆಯಂತೆ ಎದುರಿಸಲಿದ್ದೇನೆ ಎಂದು ಹೇಳಿದ ಅವರು ಜೈಲಿಗೆ ಹೋದ ಮಾತ್ರಕ್ಕೆ ತನ್ನಲ್ಲಿ ಆತ್ಮವಿಶ್ವಾಸ ಕುಂದಿಲ್ಲ ಎಂದು ಹೇಳಿದರು. |