ತನ್ನ ವಿರುದ್ಧ ಸಲ್ಲಿಸಲಾಗಿರುವ ಆರೋಪಪಟ್ಟಿಯ ಉರ್ದು ಅನುವಾದವನ್ನು ತನಗೆ ಒದಗಿಸಬೇಕು ಎಂಬುದಾಗಿ ಉಗ್ರ ಕಸಬ್ ಮಾಡಿರುವ ವಿನಂತಿಯನ್ನು ನ್ಯಾಯಾಲಯ ತಳ್ಳಿ ಹಾಕಿದೆ.
ಮುಂಬೈ ನರಮೇಧ ಪ್ರಕರಣದ ಪ್ರಧಾನ ಆರೋಪಿಯಾಗಿರುವ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್ ತನಗೆ 11ಸಾವಿರ ಪುಟಗಳ ಆರೋಪಪಟ್ಟಿಯ ಉರ್ದು ತರ್ಜಮೆ ಬೇಕು ಎಂದಿದ್ದ ಅಲ್ಲದೆ, ಆರೋಪಪಟ್ಟಿಯ ಅಧ್ಯಯನಕ್ಕಾಗಿ ಕಸಬ್ ಪರ ವಕೀಲ ಅಬ್ಬಾಸ್ ಖಾಜ್ಮಿ ಒಂದು ತಿಂಗಳ ಸಮಯಾವಕಾಶ ಕೋರಿದ್ದರು. ಈ ಮಧ್ಯೆ ಸರಕಾರಿ ಅಭಿಯೋಜಕರು ಕಸಬ್ ಬಾಲಾಪರಾಧಿಯಲ್ಲ ಎಂದು ವಾದಿಸಿದ್ದು, ಆತನನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಬೇಕು ಎಂದು ನ್ಯಾಯಾಲಯವನ್ನು ವಿನಂತಿಸಿದ್ದಾರೆ.
ಕಸಬ್ ವಕೀಲ ಅಬ್ಬಾಸ್ ಅವರು ಆರೋಪಪಟ್ಟಿಯ ಉರ್ದು ತರ್ಜಮೆ ಹಾಗೂ ಆರೋಪಳ ಅಧ್ಯಯನಕ್ಕಾಗಿ ನಾಲ್ಕುವಾರಗಳ ಕಾಲಾವಕಾಶ ಕೋರಿ ಎರಡು ಅರ್ಜಿಗಳನ್ನು ಸಲ್ಲಿಸಿದ್ದರು. ಆದರೆ ತರ್ಜಮೆ ನೀಡಲು ನಿರಾಕರಿಸಿರುವ ನ್ಯಾಯಾಲಯವು, ಮೇ 2ರ ತನಕ ಕಾಲಾವಕಾಶ ನೀಡಲು ನಿರ್ಧರಿಸಿದೆ.
ಮಹಾರಾಷ್ಟ್ರ ಸಚಿವ ನಾರಾಯಣ ರಾಣೆ ಹಾಗೂ ಕೇಂದ್ರ ಸಚಿವ ಎ.ಆರ್. ಅಂತುಳೆ ಅವರ ಹೇಳಿಕೆ ಪಡೆಯುವುದಾಗಿ ಪ್ರಕರಣದ ಇನ್ನೋರ್ವ ಆರೋಪಿ ಸಬಾವುದ್ದೀನ್ ಪರ ವಕೀಲ ಇಯಾಜ್ ನಕ್ವಿ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದರು. |