ಅವಕಾಶ ಲಭಿಸಿದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಮಾಯವತಿ ಅವರಿಗೂ 'ಮಾಂತ್ರಿಕ ಅಪ್ಪುಗೆ' ನೀಡುವೆನೆಂಬ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿರುವ ರಾಜಕಾರಣಿಯಾಗಿ ರೂಪಾಂತರಗೊಂಡಿರುವ ಬಾಲಿವುಡ್ ತಾರೆ ಸಂಜಯ್ ದತ್ ತನ್ನ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದು, ಮಾಯಾವತಿ ತನ್ನ ಸಹೋದರಿಯಂತೆ ಎಂದು ಹೇಳಿದ್ದಾರೆ.
ದತ್ ಅವರ ಈ ಹೇಳಿಕೆಯಿಂದಾಗಿ ಪ್ರತಾಪ್‌ಗಢ ದಂಡಾಧಿಕಾರಿಯವರು ನೀಡಿರುವ ನೋಟೀಸಿಗೆ ಉತ್ತರಿಸಿರುವ ಅವರು, ಈ ಮಾಂತ್ರಿಕ ಅಪ್ಪುಗೆ ಮತ್ತು ಪಪ್ಪಿ(ಜಾದೂ ಕಿ ಜಪ್ಪಿ ಔರ್ ಪಪ್ಪಿ)ಯು ತನ್ನ ಸಿನಿಮಾ ಒಂದರ ಸಂಭಾಷಣೆಯಾಗಿದ್ದು, ಸಮಾಜದಲ್ಲಿ ಪ್ರೀತಿಯನ್ನು ಹರಡುವುದು ಇದರ ಅರ್ಥ ಎಂದು ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ಮಾಯಾವತಿ ಅವರನ್ನು ತಾನು ಬೆಹನ್‌ಜಿ ಎಂದು ಸಂಬೋಧಿಸಿದ್ದು, ಇದರ ಅರ್ಥ ಸಹೋದರಿ ಎಂದಾಗಿದೆ. ಹಾಗಿರುವಾಗ ಇದನ್ನು ತನ್ನ ಸಹೋದರಿಯೆಡೆಗೆ ಸಹೋದರನ ಪ್ರೀತಿ ಎಂಬುದಾಗಿ ಪರಿಗಣಿಸಬೇಕು ಎಂದು ಅವರು ವಿನಂತಿಸಿದ್ದಾರೆ.
ತಾನು ಯಾರಿಗೂ ನೋವುಂಟು ಮಾಡಲು ಬಯಸಿಲ್ಲ ಆದರೆ ಮುಖ್ಯಮಂತ್ರಿಗಳಿಗೆ ತನ್ನ ಹೇಳಿಕೆಯಿಂದ ನೋವುಂಟಾದರೆ ಕ್ಷಮೆಯಾಚಿಸುವುದಾಗಿ ತಿಳಿಸಿದ್ದಾರೆಂದು ಎಸ್ಪಿ ಸಂಸದ ಹಾಗೂ ಹಿರಿಯ ವಕೀಲರಾಗಿರುವ ವೀರೇಂದ್ರ ಭಾಟಿಯ ತಿಳಿಸಿದ್ದಾರೆ. ಜಿಲ್ಲಾಧಿಕಾರಿಯವರು ಚುನಾವಣಾಧಿಕಾರಿಯ ತಮ್ಮ ಅಧಿಕಾರ ಬಳಸಿ ನೋಟೀಸು ನೀಡಿದ್ದರು.
ದತ್ ಅವರ ಈ ಹೇಳಿಕೆಗಾಗಿ ಅವರ ವಿರುದ್ಧ ಮೂರು ಎಫ್ಐಆರ್ ದಾಖಲಿಸಲಾಗಿದೆ. ಪ್ರತಾಪ್‌ಗಢದ ಎಸ್ಪಿ ಅಭ್ಯರ್ಥಿ ಅಕ್ಷಯ್ ಪ್ರತಾಪ್ ಪರ ಮತಯಾಚನೆ ಮಾಡುವ ವೇಳೆ ಸಂಜಯ್ ಚುನಾವಣೆ ಬಳಿಕ ಇಲ್ಲಿಯ ಜನತೆಗೆ ಮಾಂತ್ರಿಕ ಅಪ್ಪುಗೆ ನೀಡುವುದಾಗಿ, ಅವಕಾಶ ಸಿಕ್ಕರೆ ರಾಜ್ಯದ ಮುಖ್ಯಮಂತ್ರಿಗೂ ಇದನ್ನು ನೀಡುವುದಾಗಿ ಹೇಳಿ ವಿವಾದಕ್ಕೆ ಸಿಲುಕಿದ್ದರು. |