ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎ.ಆರ್. ಅಂತುಳೆ ಹಾಗೂ ಮಹಾರಾಷ್ಟ್ರ ಸಚಿವ ನಾರಾಯಣ್ ರಾಣೆ ಅವರ ಹೇಳಿಕೆಯನ್ನು ಪಡೆಯಲು ಪ್ರಕರಣ ಆರೋಪಿ ಸಬಾವುದ್ದೀನ್ ಅಹ್ಮದ್ ಪರ ವಕೀಲರಾಗಿರುವ ಇಯಾಜ್ ನಕ್ವಿ ಅವರು ಬುಧವಾರ ನ್ಯಾಯಾಲಯದ ಅನುಮತಿ ಕೋರಿದರು.
ಮುಂಬೈ ದಾಳಿ ಬಳಿಕ ಅಂತುಳೆ ಅವರು ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಅವರ ಸಾವಿನ ಕುರಿತು ಸಂಶಯಗಳನ್ನು ವ್ಯಕ್ತಪಡಿಸಿದ್ದರು. ಹೇಮಂತ್ ಕರ್ಕರೆ ಅವರು ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಬಲಪಂಥೀಯ ಹಿಂದೂ ಕಾರ್ಯಕರ್ತರ ಸಂಚನ್ನು ಬಯಲು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕರ್ಕರೆ ಸಾವಿನ ಕುರಿತು ಅಂತುಳೆ ಸಂಶಯ ವ್ಯಕ್ತಪಡಿಸಿದ್ದರೆ, ಮುಂಬೈ ದಾಳಿ ವೇಳೆಗೆ ಮಹಾರಾಷ್ಟ್ರದ ಕೆಲವು ರಾಜಕಾರಣಿಗಳು ಸಯಾಯ ನೀಡಿದ್ದಾರೆ ಎಂಬ ಹೇಳಿಕೆ ನೀಡಿದ್ದರು.
ಈ ಇಬ್ಬರ ಹೇಳಿಕೆಗಳ ಮೇಲೆ ಬೆಳಕು ಚೆಲ್ಲಲು ಇಬ್ಬರನ್ನು ಅರೋಪಿಪರ ಸಾಕ್ಷೀದಾರರಾಗಿ ವಿಚಾರಣೆ ನಡೆಸಬೇಕು ಎಂಬುದಾಗಿ ನಕ್ವಿ ಹೇಳಿದ್ದಾರೆ. ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ.ಎಲ್. ತಹಿಲ್ಯಾನಿ ಅನುಮತಿ ನೀಡಿದ್ದು ಇವರನ್ನು ಡಿಫೆನ್ಸ್ ಸಾಕ್ಷಿದಾರರಾಗಿ ವಿಚಾರಣೆ ನಡೆಸಲು ವಕೀಲರು ಮುಕ್ತರಾಗಿದ್ದಾರೆ ಎಂದು ಹೇಳಿದ್ದಾರೆ.
ತನ್ನ ಕಕ್ಷಿದಾರ ಸಬಾವುದ್ದೀನ್, ಪ್ರಕರಣದ ಸಹ ಆರೋಪಿ ಫಾಹಿಮ್‌ನನ್ನು ಭೇಟಿಯಾಗಲು ನೇಪಾಳಕ್ಕೆ ತೆರಳಿದ್ದ ಎಂಬ ಪ್ರಾಸಿಕ್ಯೂಶನ್ ಆರೋಪವನ್ನು ತಳ್ಳಿಹಾಕಿದ್ದು, ಫಾಹಿಮ್ ಮತ್ತು ಸಬಾವುದ್ದೀನ್ ಮೊದಲಿಗೆ ಉತ್ತರಪ್ರದೇಶದ ಎಟಿಎಸ್ ವಶದಲ್ಲಿದ್ದಾಗ ಪರಸ್ಪರ ಭೇಟಿಯಾಗಿದ್ದರು ಎಂದು ನ್ಯಾಯಾಲಯದ ಮುಂದೆ ಅರಿಕೆ ಮಾಡಿಕೊಂಡರು.
ಮುಂಬೈದಾಳಿ ವೇಳೆಗೆ ಪೊಲೀಸರ ಗುಂಡಿಗೆ ಆಹುತಿಯಾದ ಕಸಬ್‌ನ ಸಹಚರ ಇಸ್ಮಾಯಿಲ್ ಖಾನ್ ಕಿಸೆಯಲ್ಲಿ ದೊರೆತ ನಕ್ಷೆಯಲ್ಲಿ ರಾಜಭವನ, ಚೌಪಾಟಿ ಮತ್ತು ಮಲಬಾರ್ ಹಿಲ್‌ಗಳನ್ನು ತೋರಿಸುತ್ತಿತ್ತು. ಆದರೆ ಈ ಇಬ್ಬರು ಸಿಎಸ್‌ಟಿಗೆ ಹೇಗೆ ತಲುಪಿದರು ಎಂಬುದು ಸ್ಪಷ್ಟವಿಲ್ಲ ಮತ್ತು ಇದನ್ನು ನಕಾಶೆಯಲ್ಲಿ ಎದ್ದುಗಾಣಿಸಿಲ್ಲ ಎಂದು ವಾದಿಸಿದರು.
ಇಸ್ಮಾಯಿಲ್ ಕಿಸೆಯಲ್ಲಿ ಈ ನಕಾಶೆಯು ಕಳೆದ ವರ್ಷ ನವೆಂಬರ್ 27ರಂದು ದೊರೆತಿದ್ದರೂ, ಅದನ್ನು ಯಾಕೆ ಜನವರಿ 23ರಂದು ನ್ಯಾಯಾಲಯಕ್ಕೆ ಒಪ್ಪಿಸಲಿಲ್ಲ. ಅಲ್ಲದೆ, ಫಾಹಿಂ ತಯಾರಿಸಿದ್ದಾನೆ ಎಂದು ಹೇಳಲಾಗಿರುವ ಈ ನಕಾಶೆಯನ್ನು ಸಬಾವುದ್ದೀನ್ ಪಾಕಿಸ್ತಾನಕ್ಕೆ ಹೇಗೆ ತಲುಪಿಸಿದ ಮತ್ತು ಕಸಬ್ ತನ್ನ ತಪ್ಪೊಪ್ಪಿಗೆಯಲ್ಲಿ ಸಬಾವುದ್ದೀನ್ ಕುರಿತು ಏನೂ ಹೇಳಿಲ್ಲ ಎಂಬುದಾಗಿ ನಕ್ವಿ ವಾದಿಸಿದರು.
ತಾನು ಹೊಂದಿದ್ದ ತನ್ನ ವಸ್ತುಗಳನ್ನು ತನಿಕಾಧಿಕಾರಿಗಳು ಹಿಡಿದಿಟ್ಟುಕೊಂಡಿದ್ದಾರೆ ಎಂದು ಆರೋಪಿಸಿ ಅದನ್ನು ತನಗೆ ಮರಳಿಸಬೇಕು ಎಂಬುದಾಗಿ ಸಬಾವುದ್ದೀನ್ ಮಾಡಿರುವ ವಿನಂತಿಯ ಅನುಸಾರ, ಈ ವಸ್ತುಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸುವಂತೆ ನ್ಯಾಯಾಧೀಶರು ತನಿಖಾಧಿಕಾರಿಗಳಿಗೆ ನಿರ್ದೇಶನ ಮಾಡಿದರು. |