ಗುವಾಹಟಿ ಲೋಕಸಭಾಕ್ಷೇತ್ರದ ವ್ಯಾಪ್ತಿಗೆ ಬರುವ ದಿಸಾಪುರದ ಮತಗಟ್ಟೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಅವರ ಪತ್ನಿ ಗುರುಶರಣ್ ಕೌರ್ ಗುರವಾರ ಮತಚಲಾಯಿಸಿದರು.ಪೂರ್ವಾಹ್ನ ಸುಮಾರು 11 ಗಂಟೆಯ ವೇಳೆಗೆ ಲೋಕಪ್ರಿಯ ಗೋಪಿನಾಥ್ ಬೋಡ್‌ಲೋಯ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಂದಿಳಿದ ಸಿಂಗ್ ಮತ್ತು ಅವರ ಪತ್ನಿ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ತೆರಳಿ ಖಾನಾಪುರದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಹೆಲಿಪ್ಯಾಡ್‌ನಲ್ಲಿ ಬಂದಿಳಿದರು.ಅಲ್ಲಿಂದ ದಿಸಾಪುರ ಸರ್ಕಾರಿ ಶಾಲೆಯ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು. ಅಸ್ಸಾಮಿನಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಮನಮೋಹನ್ ಸಿಂಗ್ ಅವರ ಹೆಸರು ಮತದಾರ ಪಟ್ಟಿಯ ಕ್ರಮಾಂಕ ಸಂಖ್ಯೆ 726 ಆಗಿದ್ದರೆ, ಅವರ ಪತ್ನಿಯ ಸಂಖ್ಯೆ 727 ಆಗಿದೆ.2004 ರ ಲೋಕಸಭೆ ಹಾಗೂ 2006ರ ವಿಧಾನಸಭಾ ಚುನಾವಣೆಯ ವೇಳೆ ಪ್ರಧಾನಿ ಸಿಂಗ್ ಮತ ಚಲಾಯಿಸಿರಲಿಲ್ಲ. |