ಯುಪಿಎಗೆ ಎಡಪಕ್ಷಗಳ ಆಶೀರ್ವಾದದ ಅವಶ್ಯಕತೆ ಇದೆ ಎಂದು ಹೇಳಿರುವ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಚುನಾವಣೋತ್ತರ ಪರಿಸ್ಥಿತಿಯಲ್ಲಿ ಎಡಪಕ್ಷಗಳಿಗೆ ಬಾಗಿಲನ್ನು ಮುಕ್ತವಾಗಿಸಬೇಕಾಗಿದೆ ಎಂದಿದ್ದು, ಯುಪಿಎಯು ತನ್ನ ಪ್ರಧಾನಿಯನ್ನು ಚುನಾವಣೆಯ ಬಳಿಕ ನಿರ್ಧರಿಸಲಿದೆ ಎಂದೂ ಹೇಳಿದ್ದಾರೆ." ಈ ಸರ್ತಿ ಎಡಪಕ್ಷಗಳ ಬೆಂಬಲ ಮತ್ತು ಆಶೀರ್ವಾದ ನಮಗೆ ಬೇಕಾಗಬಹುದು ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ. ಅದಕ್ಕಾಗಿಯೇ ನಾನು ಮೊದಲ ದಿನದಿಂದಲೇ, ಎಡಪಕ್ಷಗಳೊಂದಿಗೆ ಸೌಹಾರ್ದವಾಗಿರುವಂತೆ ನನ್ನೆಲ್ಲ ಯುಪಿಎ ಸಹವರ್ತಿಗಳನ್ನು ವಿನಂತಿಸಿಕೊಂಡಿದ್ದೆ" ಎಂಬುದಾಗಿ ಪವಾರ್ ಹೇಳಿದ್ದಾರೆ.ಚುನಾವಣಾ ನಂತರ ಸರ್ಕಾರ ರೂಪಿಸಲು ಯುಪಿಎಗೆ ಎಡಪಕ್ಷಗಳ ಬೆಂಬಲ ಅವಶ್ಯಕತೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಿದ್ದರು." ಅವರು ತಮ್ಮನ್ನು ಬೆಂಬಲಿಸುತ್ತಿದ್ದಾರೆ. ನಾವು ರಾಷ್ಟ್ರಕ್ಕೆ ಸ್ಥಿರ ಸರ್ಕಾರ ನೀಡಿದ್ದರೆ ಅದರ ಕ್ರೆಡಿಟ್ ಎಡಪಕ್ಷಗಳಿಗೆ ಸಲ್ಲಬೇಕು. ಕೋಮುವಾದಿ ಸಂಘಟನೆಗಳನ್ನು ಬೆಂಬಲಿಸದ ಏಕೈಕ ಬಳಗವೆಂದರೆ ಅದು ಎಡಪಕ್ಷಗಳು" ಎಂದು ಪವಾರ್ ನುಡಿದರು. ಪವಾರ್ ಮತಚಲಾವಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯಾಗಿ ಬಿಂಬಿಸಿರುವುದನ್ನು ಅಲ್ಲಗಳೆದ ಪವಾರ್, ಯುಪಿಎಯು ತನ್ನ ಪ್ರಧಾನಿಯನ್ನು ತನ್ನ ಮಿತ್ರಪಕ್ಷಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕವಷ್ಟೆ ನಿರ್ಧರಿಸಲಿದೆ ಎಂದು ಹೇಳಿದ್ದಾರೆ. |