ನಕ್ಸಲ್ ಪೀಡಿತ ಜಾರ್ಖಂಡ್‌ನಲ್ಲಿ ದ್ವಿತೀಯ ಹಾಗೂ ಕೊನೆಯ ಹಂತದ ಮತದಾನ ಅಂತ್ಯಗೊಂಡಿದ್ದು, ಶೇ.40ಕ್ಕಿಂತ ಹೆಚ್ಚು ಮತದಾನವಾಗಿದೆ. ಕೆಲವೆಡೆ ನಡೆದಿರುವ ಹಿಂಸಾಚಾರ ಹೊರತುಪಡಿಸಿದರೆ ಹೆಚ್ಚೂಕಮ್ಮಿ ಶಾಂತಿಯುತ ಮತದಾನವಾಗಿದೆ. ಜಾರ್ಖಂಡ್‌ನ ಒಟ್ಟು ಎಂಟು ಕ್ಷೇತ್ರಗಳಲ್ಲಿ ಮೂರು ಕ್ಷೇತ್ರಗಳಲ್ಲಿ ಮೊದಲ ಹಂತದಲ್ಲಿ ಮತದಾನ ನಡೆದಿದ್ದರೆ, ಗುರುವಾರದ ದ್ವಿತೀಯ ಹಂತದಲ್ಲಿ ಐದು ಸ್ಥಾನಗಳಿಗೆ ಮತದಾನ ನಡೆದಿತ್ತು.
ರಾಂಚಿ, ಜೆಮ್ಶೆಡ್ಪುರ, ಸಿಂಗಬಮ್, ಗಿರಿದಿ ಮತ್ತು ಧನಾಬಾದ್ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಮೂರು ಗಂಟೆಗೆ ಮತದಾನ ಅಂತ್ಯಗೊಂಡಿದೆ. ಈ ಕ್ಷೇತ್ರಗಳು ನಕ್ಸಲ್ ಬಾಹುಳ್ಯದ ಕ್ಷೇತ್ರಗಳೆಂದು ಪರಿಗಣಿಸಿರುವ ಕಾರಣ ಇಲ್ಲಿ ಮೂರು ಗಂಟೆಗೇ ಮತದಾನ ಅಂತ್ಯಗೊಳಿಸಲಾಗಿದೆ ಎಂದು ಜಂಟಿ ಚುನಾವಣಾಧಿಕಾರಿ ಎ.ಕೆ.ಸಿನ್ಹಾ ತಿಳಿಸಿದ್ದಾರೆ.
ಜೆಮ್ಶೆಡ್ಪುರ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಅರ್ಜುನ್ ಮುಂಡಾ(ಬಿಜೆಪಿ), ರಾಂಚಿಯಿಂದ ಕೇಂದ್ರ ಸಚಿವ ಸುಭೋದ್ ಕಾಂತ್ ಸಹಾಯ್ ಹಾಗೂ ಸಿಂಗಬಂನಿಂದ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಅವರು ಕಣಕ್ಕಿಳಿದಿದ್ದು, ಇವರುಗಳು ಹಣೆಬರಹ ಮತದಾನ ಯಂತ್ರದೊಳಗೆ ಭದ್ರವಾಗಿದೆ. ಕೋಡಾ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಜೆಮ್ಶೆಡ್ಪುರದಲ್ಲಿ ನಕ್ಸಲರು ನೆಲಬಾಂಬುಗಳನ್ನು ಸ್ಫೋಟಿಸಿದ್ದ ಹಿನ್ನೆಲೆಯಲ್ಲಿ ಗುಂಡಿನ ಚಕಮಕಿ ನಡೆದಿದೆ. ಗಟ್‌ಸಿಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇನ್ನೊಂದು ಸ್ಫೋಟ ಸಂಭವಿಸಿದೆ.
ಪಶ್ಚಿಮ ಸಿಂಗಬಮ್ ಜಿಲ್ಲೆಯಲ್ಲಿ ನಕ್ಸಲ್ ಬಂಡುಕೋರರು ಮುಂಜಾನೆ ಸಿಆರ್‌ಪಿಎಫ್ ಶಿಬಿರದ ಮೇಲೆ ದಾಳಿ ನಡೆಸಿದ್ದು, ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಇದಲ್ಲದೆ, ಬುಧವಾರ ರಾತ್ರಿ ಚಿಯಾಂಕಿ ರೈಲ್ವೇ ನಿಲ್ದಾಣದಲ್ಲಿ ಬಾಂಬ್ ಸ್ಫೋಟ ನಡೆಸಿದ್ದಾರೆ.
ಬುಧವಾರ ಲಟೇಹರ್ ಜಿಲ್ಲೆಯಲ್ಲಿ ರೈಲೊಂದನ್ನು ಸುಮಾರು ಮೂರು ಗಂಟೆಗಳ ಕಾಲ ಹಿಡಿದಿರಿಸಿಕೊಂಡಿದ್ದು ಬಳಿಕ ಬಿಟ್ಟು ಪರಾರಿಯಾಗಿದ್ದರು.
|