ಅಸ್ತಾಮಾದಿಂದ ಬಳಲುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲು ಶಾಲೆಯಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿಲ್ಲ ಎಂದು ಆಕ್ರೋಶಭರಿತ ಹೆತ್ತವರು ಮತ್ತು ಇತರ ವಿದ್ಯಾರ್ಥಿಗಳು ಪ್ರಾಂಶುಪಾಲರನ್ನು ಮುತ್ತಿಗೆ ಹಾಕಿ ಘೋಷಣೆಗಳನ್ನು ಕೂಗಿದ ಘಟನೆ ದೆಹಲಿಯ ವಸಂತ್ ವಿಹಾರದ ಮೋಡರ್ನ್ ಸ್ಕೂಲ್‌ನಲ್ಲಿ ಸಂಭವಿಸಿದೆ.
ಅಸ್ವಸ್ಥ ವಿದ್ಯಾರ್ಥಿನಿಯ ಕುರಿತು ನಿರ್ಲಕ್ಷ್ಯ ವಹಿಸಿದ್ದ ಪ್ರಾಂಶುಪಾಲರಾದ ಗೊಲ್ಡಿ ಮಲ್ಲೋತ್ರಾ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ನಡೆಸಿದ ಪ್ರತಿಭಟನೆಯಲ್ಲಿ ದೆಹಲಿಯ ಇತರ ಶಾಲಾ ವಿದ್ಯಾರ್ಥಿಗಳೂ ಪಾಲ್ಗೊಂಡಿದ್ದರು. ಉಸಿರಾಡಲು ಕಷ್ಟಪಡುತ್ತಿದ್ದ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಶಾಲೆಯು ವಾಹನ ಒಂದನ್ನು ನೀಡಿಲ್ಲ ಎಂಬುದು ಅತ್ಯಂತ ಅಮಾನವೀಯ ಎಂಬುದಾಗಿ ಶಾಲೆಯ ಹೆತ್ತವರು ಶಿಕ್ಷಕರ ಸಂಘಟನೆಯ ಮಾಜಿ ಸದಸ್ಯರೊಬ್ಬರು ಖೇದವ್ಯಕ್ತಪಡಿಸಿದ್ದಾರೆ.
ಶಾಲೆಯಲ್ಲಿ ನೂರಾರು ಕಾರುಗಳಿವೆ. ಸ್ವತಹ ಪ್ರಾಂಶುಪಾಲರೂ ಕಾರು ಹೊಂದಿದ್ದಾರೆ. ಅವರು ಅಂಬುಲೆನ್ಸ್‌ಗೆ ಯಾಕೆ ಕಾಯುತ್ತಿದ್ದರು. ಮಲ್ಲೋತ್ರ ಒಬ್ಬ ನೀತಿಯಿಲ್ಲದ ಪ್ರಾಂಶುಪಾಲೆಯಾಗಿದ್ದು ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸಾವಿಗೀಡಾಗಿರುವ ವಿದ್ಯಾರ್ಥಿನಿ ಆಕೃತಿ ಭಾಟಿಯಾಳ ಹೆತ್ತವರೂ ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಶಾಲಾ ಆಡಳಿತ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಶಾಲಾಡಳಿತ ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಘರ್ಷಣೆ ನಡೆಯಿತು.
ಆಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದ ಹನ್ನೆರಡನೆ ತರಗತಿ ವಿದ್ಯಾರ್ಥಿನಿಯಾಗಿದ್ದ ಆಕೃತಿಗೆ ಸೋಮವಾರ ಶಾಲೆಯಲ್ಲೇ ಕಾಯಿಲೆ ಉಲ್ಬಣಿಸಿದ್ದು, ಆಸ್ಪತ್ರೆಗೆ ಕರೆದೊಯ್ಯುವ ದಾರಿಯಲ್ಲಿ ಸಾವನ್ನಪ್ಪಿದ್ದಳು. ಆದರೆ ಆಕೆಯ ಸಾವಿಗೆ ಶಾಲೆಯ ನಿರ್ಲಕ್ಷ್ಯ ಕಾರಣ ಎಂಬುದನ್ನು ಒಪ್ಪಿಕೊಳ್ಳಲು ಪ್ರಾಂಶುಪಾಲರು ನಿರಾಕರಿಸಿದ್ದಾರೆ.
ಪ್ರಾಂಶುಪಾಲರು ಕ್ಷಮೆಯಾಚಿಸಬೇಕು ಮತ್ತು ಅವರು ರಾಜೀನಾಮೆ ನೀಡುವ ತನಕ ನಾವು ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಹೆತ್ತವರು ಹೇಳುತ್ತಿದ್ದಾರೆ.
ಆಕೃತಿ ಉಸಿರಾಟದ ತೊಂದರೆ ಎದುರಿಸಿದ್ದು ತನ್ನ ಶಿಕ್ಷರಿಗೆ ತಿಳಿಸಿದ್ದಳು, ಬಳಿಕ ಆಕೆ ತನ್ನ ತಾಯಿಗೂ ಫೋನ್ ಮೂಲಕ ತಿಳಿಸಿದ್ದಳು. ಆಕೆಯನ್ನು ಶಾಲೆಯ ಕ್ರೀಡಾ ಕೊಠಡಿಗೆ ಕರೆದೊಯ್ದು ಆಕ್ಸಿಜನ್ ನೀಡಲಾಗಿತ್ತು. ಆದರೆ ಆಕೆಯ ಪರಿಸ್ಥಿತಿ ಕುಸಿದಾಗ ಹೋಲಿ ಏಂಜೆಲ್ಸ್ ಆಸ್ಪತ್ರೆಗೆ ಕರೆದೊಯ್ದರೂ, ಆಕೆ ಸಾವನ್ನಪ್ಪಿರುವುದಾಗಿ ಘೋಷಿಸಿದ್ದರು. |