ದೇಶದ 12 ರಾಜ್ಯಗಳ 140 ಲೋಕಸಭಾ ಕ್ಷೇತ್ರಗಳಲ್ಲಿ ಗುರುವಾರ ಮುಕ್ತಾಯಗೊಂಡ ಎರಡನೇ ಹಂತದ ಚುನಾವಣೆಯಲ್ಲಿ 19.4ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸುವ ಮೂಲಕ ಯಾವುದೇ ಅಹಿತಕರ ಘಟನೆ ನಡೆಯದೆ ಶಾಂತಿಯುತವಾಗಿ ಅಂದಾಜು ಶೇ.55ರಷ್ಟು ಮತದಾನವಾಗಿದೆ.ಈ ಬಾರಿಯ ಚುನಾವಣೆ ತೃಪ್ತಿದಾಯಕವಾಗಿ ನಡೆದಿದದ್ದು, ಯಾವುದೇ ಅಹಿತಕರ ಘಟನೆಗಳಿಂದ ಮುಕ್ತವಾಗಿದೆ ಎಂದು ಉಪಚುನಾವಣಾ ಆಯುಕ್ತ ಆರ್. ಬಾಲಕೃಷ್ಣನ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.ಎರಡನೇ ಹಂತದಲ್ಲಿ ಶೇಕಡವಾರು ಮತದಾನ: ಆಂಧ್ರಪ್ರದೇಶ-ಶೇ.68, ಅಸ್ಸಾಂ-ಶೇ.62, ಬಿಹಾರ್-ಶೇ.44, ಗೋವಾ-ಶೇ.55, ಜಮ್ಮು-ಕಾಶ್ಮೀರ-ಶೇ.46, ಜಾರ್ಖಂಡ್-ಶೇ.47, ಕರ್ನಾಟಕ-ಶೇ.55, ಮಧ್ಯಪ್ರದೇಶ-ಶೇ.45, ಮಹಾರಾಷ್ಟ್ರ-ಶೇ.56, ಮಣಿಪುರ-ಶೇ.65, ಒರಿಸ್ಸಾ-ಶೇ.55, ತ್ರಿಪುರಾ-ಶೇ.80, ಉತ್ತರಪ್ರದೇಶ-ಶೇ.44ರಷ್ಟು ಮತದಾನವಾಗಿದೆ. ಬಿಹಾರ ಮತ್ತು ಉತ್ತರ ಪ್ರದೇಶಗಳಲ್ಲಿ ಅತಿ ಕಡಿಮೆ-ಶೇ.44 ಹಾಗೂ ತ್ರಿಪುರಾದಲ್ಲಿ ಅತಿ ಹೆಚ್ಚು-ಶೇ.80ರಷ್ಟು ಮತದಾನವಾಗಿದೆ. ಸರದಿಯಲ್ಲಿ ನಿಂತು ಮತ ಚಲಾಯಿಸಿದ ಪ್ರಧಾನಿ ಸಿಂಗ್: ದಿಸ್ಸುರ್ ಮತಗಟ್ಟೆಯಲ್ಲಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ತಮ್ಮ ಪತ್ನಿ ಗುರಶರಣ್ ಕೌರ್ ಜತೆಗೆ ಆಗಮಿಸಿ ಜನಸಾಮಾನ್ಯ ಮತದಾರರ ಸಾಲಿನಲ್ಲಿ ನಿಂತು ಹಕ್ಕನ್ನು ಚಲಾಯಿಸಿದ್ದು ವಿಶೇಷವಾಗಿ ಗಮನ ಸೆಳೆಯಿತು. |