ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ತಾವು 'ದುರ್ಬಲ' ನಾಯಕ ಅಲ್ಲ ಎಂದು ಸಾಬೀತು ಮಾಡಬೇಕಿದ್ದರೆ, ವರುಣ್ ಗಾಂಧಿ ಮೇಲೆ ರೋಲರ್ ಹಾಯಿಸುತ್ತೇನೆಂದು ಹೇಳಿದ್ದ ಲಾಲು ಪ್ರಸಾದ್ ಯಾದವ್ ಅವರನ್ನು ಸಂಪುಟದಿಂದ ಕಿತ್ತೊಗೆಯಬೇಕಿತ್ತು ಎಂದು ಬಿಜೆಪಿ ಹೇಳಿದೆ.
ಲಾಲು ಈ ರೀತಿ ಹೇಳಿದ್ದಾರೆ ಎಂಬುದನ್ನು ಕೇಳಿದ ತಕ್ಷಣ ನನ್ನ ಮೊದಲ ಪ್ರತಿಕ್ರಿಯೆ, ಲಾಲು ಅವರನ್ನು ಮನಮೋಹನ್ ಸಿಂಗ್ ತಕ್ಷಣವೇ ವಜಾಗೊಳಿಸಬೇಕೆಂಬುದಾಗಿತ್ತು. ಈ ಮೂಲಕವಾದರೂ ಮನಮೋಹನ್ ತಾವು 'ದುರ್ಬಲ ಪ್ರಧಾನಿ' ಅಲ್ಲ ಎಂಬುದನ್ನು ತೋರಿಸಿಕೊಡಬಹುದಿತ್ತು ಎಂದು ಹಿರಿಯ ಬಿಜೆಪಿ ಮುಖಂಡ ಮುರಳಿ ಮನೋಹರ ಜೋಷಿ ಹೇಳಿದ್ದಾರೆ.
ಆರ್‌ಜೆಡಿಯು ಪ್ರತ್ಯೇಕವಾಗಿಯೇ ಚುನಾವಣೆಗೆ ಸ್ಪರ್ಧಿಸುತ್ತಿದೆ ಎಂಬುದು ಗೊತ್ತಿದ್ದು ಕೂಡ, ರೈಲ್ವೇ ಸಚಿವ ಲಾಲು ಅವರು ಕೇಂದ್ರದ ಯುಪಿಎ ಸರಕಾರಕ್ಕೆ ರಾಜೀನಾಮೆ ನೀಡಿಲ್ಲ. ಹೀಗಾಗಿ ಅವರು ಯುಪಿಎ ಸರಕಾರದ ಎಲ್ಲ ಕೃತ್ಯಗಳಿಗೆ ಲಾಲು ಕೂಡ ಹೊಣೆಗಾರರು ಎಂದು ಜೋಷಿ ಹೇಳಿದರು.
ಇಂಥದ್ದೊಂದು ಅತ್ಯುನ್ನತ ಪದವಿಯಲ್ಲಿದ್ದುಕೊಂಡು, ವರುಣ್‌ರ ಮೇಲೆ ರೋಲರ್ ಹಾಯಿಸಿ ಚಚ್ಚಿಬಿಡುತ್ತೇನೆ ಎಂಬಂತಹ ಮಾತುಗಳನ್ನು ಆಡುವುದು ತೀರಾ ಬಾಲಿಶ. ಅಷ್ಟು ಮಾತ್ರವಲ್ಲ, ನಾನೇನಾದರೂ ಗೃಹ ಸಚಿವನಾಗಿದ್ದಿದ್ದರೆ ಈ ರೀತಿ ಮಾಡುತ್ತಿದ್ದೆ ಎಂಬ ಲಾಲು ಹೇಳಿಕೆಯು, ಈ ವಿಷಯದಲ್ಲಿ ಕೇಂದ್ರ ಸರಕಾರವು ತೆಗೆದುಕೊಂಡ ನಿರ್ಧಾರದಿಂದ ತಾವು ದೂರ ಎಂಬುದರ ಸೂಚಕ. ಸರಕಾರದ ಭಾಗವಾಗಿ ಈ ರೀತಿ ವಿಭಿನ್ನವಾಗಿ ವರ್ತಿಸುವಂತಿಲ್ಲ ಎಂದು ಮಾಜಿ ಕೇಂದ್ರ ಸಚಿವ ಜೋಷಿ ನುಡಿದರು.
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅವರನ್ನು ಸುಮ್ಮನೆ ಬಿಡಬಾರದಿತ್ತು. ಅದೀಗ ಅದಕ್ಕೇ ಮುಳುವಾಗುತ್ತಿದೆ. ಲಾಲು ಅವರು ಬಾಯಿಗೆ ಬಂದಂತೆ ಕಾಂಗ್ರೆಸ್ಸನ್ನು ಹೀಯಾಳಿಸತೊಡಗಿದ್ದಾರೆ. ಇವೆಲ್ಲವೂ ಬಿಹಾರದಲ್ಲಿ ಎನ್‌ಡಿಎಗೆ ಪೂರಕವಾಗಿಬಿಡುತ್ತದೆ ಎಂದು ಬಿಜೆಪಿಯ ಮಾಜಿ ಅಧ್ಯಕ್ಷರೂ ಆಗಿರುವ ಜೋಷಿ ಹೇಳಿದರು. |