ವರುಣ್ ಗಾಂಧಿಯ ಮಾವ ಹಾಗೂ ಈ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿರೇಂದರ್ ಮೋಹನ್ ಸಿಂಗ್ ತಮ್ಮ ಆಸ್ತಿ ವಿವರವನ್ನು ಸಲ್ಲಿಸಿದ್ದಾರೆ. ವಿರೇಂದರ್ ಸಿಂಗ್ ಅವರ ಆಸ್ತಿ 631 ಕೋಟಿ ರೂಪಾಯಿಗಳು.
ಫಿಲಿಬಿತ್ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ತಮ್ಮ ಆಸ್ತಿವಿವರ ಸಲ್ಲಿಸಿದ ವಿರೇಂದರ್ ಸಿಂಗ್, ಅವಿವಾಹಿತ ಅಭ್ಯರ್ಥಿ. ದಾಖಲೆಗಳ ಪ್ರಕಾರ, ಅವರ ಬಳಿ ಇರುವ ಒಟ್ಟು ನಗದು 15 ಲಕ್ಷ ರೂಪಾಯಿಗಳು. ಹಾಗೂ ಬ್ಯಾಂಕ್‌ನಲ್ಲಿ 26.50 ಲಕ್ಷ ರೂಪಾಯಿಗಳಿವೆ. ವಿರೇಂದರ್ ಬಳಿ ಒಟ್ಟು 14 ಲಕ್ಷ ರೂಪಾಯಿಗಳ ವಾಹನಗಳಿವೆ. ಇದರಲ್ಲಿ 10 ಲಕ್ಷ ರೂಪಾಯಿಗಳ ಇನೋವಾ ಕಾರು ಹಾಗೂ ಪ್ರತಿಯೊಂದು ಎರಡು ಲಕ್ಷ ಬೆಲೆಬಾಳುವ ಟಾಟಾ 207 ವಾಹನಗಳು ಸೇರಿವೆ.
ಇದಲ್ಲದೆ, ಎರಡು ಕೃಷಿಯೇತರ ಭೂಮಿಗಳಿದ್ದು, 1.5 ಎಕರೆ ಭೂಮಿ ದೆಹಲಿಯಲ್ಲಿದ್ದರೆ, ಇನ್ನೊಂದು 100 ಎಕರೆ ಭೂಮಿ ಭೂಪಾಲ್‌ನಲ್ಲಿದೆ. ಈ ಎರಡೂ ಭೂಮಿಯ ಒಟ್ಟು ಮೌಲ್ಯ 206 ಕೋಟಿ ರೂಪಾಯಿಗಳು.
ಅಷ್ಟೇ ಅಲ್ಲ. ಬರೋಬ್ಬರಿ 414.60 ಕೋಟಿ ರೂ ಬೆಲೆಬಾಳುವ ಕೃಷಿ ಭೂಮಿಯನ್ನೂ ಈ ಅವಿವಾಹಿತ ವಿರೇಂದರ್ ಹೊಂದಿದ್ದಾರೆ. ಈ ಪೈಕಿ 36.60 ಕೋಟಿ ರೂಪಾಯಿ ಬೆಲೆಬಾಳುವ 366 ಎಕರೆ ಕೃಷಿ ಭೂಮಿ ಮಧ್ಯಪ್ರದೇಶದ ರೈಸನ್‌ನಲ್ಲಿದ್ದರೆ, ಮತ್ತೊಂದು ಕೃಷಿ ಭೂಮಿ ದೆಹಲಿಯಲ್ಲಿದೆ. 270 ಎಕರೆಯ ಈ ಕೃಷಿ ಭೂಮಿಯ ಮೌಲ್ಯ 270 ಕೋಟಿ ರೂಪಾಯಿಗಳು. ಅಲ್ಲದೆ, ಭೂಪಾಲ್‌ನಲ್ಲಿಯೂ 54 ಎಕರೆ ವಿಸ್ತಾರದ 108 ಕೋಟಿ ಬೆಲೆ ಬಾಳುವ ಕೃಷಿ ಭೂಮಿಯನ್ನೂ ವಿರೇಂದರ್ ಹೊಂದಿದ್ದಾರೆ. ಇವಿಷ್ಟೇ ಅಲ್ಲ. 11 ಕೋಟಿ ರೂಪಾಯಿ ಬೆಲೆ ಬಾಳುವ ಎರಡು ಮನೆಗಳಿಗೂ ವಿರೇಂದರ್ ಒಡೆಯ.
ಅಂದಹಾಗೆ, ಪರಿಶಿಷ್ಟ ಜಾತಿ ಹಾಗೂ ಪಂಗಡ ಕಾಯಿದೆಯಡಿ ಮೂರು ಮೊಕದ್ದಮೆಗಳನ್ನೂ ವಿರೇಂದರ್ ಎದುರಿಸುತ್ತಿದ್ದಾರೆ. |