ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ(ಎನ್‌ಡಿಎ)ವು ವಿಭಜಕ ಮತ್ತು ಸಿಟ್ಟಿನ ರಾಜಕೀಯ ಮಾಡುತ್ತಿದೆ, ಆದರೆ ಕಾಂಗ್ರೆಸ್ ನೇತೃತ್ವದ ಯುಪಿಎ ಪ್ರೀತಿ, ಸ್ನೇಹ ಮತ್ತು ಭವಿಷ್ಯಕ್ಕೆ ಒತ್ತಾಸೆಯಾಗಿ ನಿಲ್ಲುತ್ತದೆ ಎಂದು ಕಾಂಗ್ರೆಸ್ ಪ್ರಧಾನ ಕ್ರಾಯದರ್ಶಿ ರಾಹುಲ್ ಗಾಂಧಿ ಹೇಳಿದ್ದಾರೆ. ಅವರು ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದರು.
"ನಾನಿಂದು ಇಲ್ಲಿಗೆ ಒಬ್ಬ ರಾಜಕಾರಣಿಯಾಗಿ ಬಂದಿಲ್ಲ, ಕಾಶ್ಮೀರದ ಯವ ಜನತೆಗೆ ಸ್ನೇಹದ ಹಸ್ತ ಚಾಚುವ ಓರ್ವ ಯುವಕನಾಗಿ ಬಂದಿದ್ದೇನೆ. ಈ ಸರ್ತಿ ನಿಮ್ಮ ಮತ ನ್ಯಾಶನಲ್ ಕಾನ್ಫರೆನ್ಸ್(ಎನ್ಸಿ) ಅಥವಾ ಪಿಡಿಪಿಗೆ ಅಲ್ಲ. ಅದು ಕಾಂಗ್ರೆಸ್ ನೇತೃತ್ವದ ಯುಪಿಎ ಅಥನಾ ಭಾರತೀಯ ಜನತಾಪಕ್ಷದ ನೇತೃತ್ವದ ಎನ್‌ಡಿಎಗೆ" ಎಂದು ರಾಹುಲ್ ಹೇಳಿದರು.
ನಿಮಗೆ ರಾಷ್ಟ್ರದ ಮುಂದಿನ ಪ್ರಧಾನಿಯಾಗಿ ಮನಮೋಹನ್ ಸಿಂಗ್ ಬೇಕೋ ಅಥವಾ ಎಲ್.ಕೆ. ಆಡ್ವಾಣಿ ಬೇಕೋ ಎಂಬುದನ್ನು ನೀವು ಆರಿಸಬೇಕಿದೆ. ನಿಮ್ಮ ಆಯ್ಕೆ ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್‌ನ ತರುಣ ನಾಯಕ ಹೇಳಿದರು.
ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯವು ಅಭಿವೃದ್ಧಿ ಕಾರ್ಯಗಳನ್ನು ಸಾಕ್ಷ್ಯೀಕರಿಸಿದೆ ಎಂದವರು ಹೇಳಿದರು. "ನಾನು ಇಂದು ನಿಮ್ಮ ರೈಲ್ವೈ ಲೈನನ್ನು ನೋಡಿದೆ. ಇದನ್ನು ಯುಪಿಎ ಆಡಳಿತಾವಧಿಯಲ್ಲಿ ನಿರ್ಮಿಸಲಾಗಿದೆ. ಶ್ರೀನಗರ ವಿಮಾನ ನಿಲ್ದಾಣವೀಗ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಇದೆಲ್ಲವೂ ಸಾಧ್ಯವಾದದು ಯುಪಿಎ ಆಡಳಿತಾವಧಿಯಲ್ಲಿ" ಎಂಬುದಾಗಿ ಯುವ ಕಾಂಗ್ರೆಸ್‌ನ ಯುವ ನೇತಾರ ಹೇಳಿದ್ದಾರೆ.
"ಎನ್‌ಡಿಎಯು ರಾಷ್ಟ್ರದ ಕೆಲವೇ ರಾಜ್ಯಗಳಲ್ಲಿ ಆಯ್ದ ಪ್ರಗತಿ ಬಯಸಿದರೆ, ಪ್ರತಿಯೊಬ್ಬರನ್ನೂ ಅಭಿವೃದ್ಧಿಯ ಪಥದಲ್ಲಿ ಕರೆದೊಯ್ಯಲು ಯುಪಿಎ ಬಯಸುತ್ತಿದೆ ಎಂದ ಹೇಳಿದ ಅವರು ತನ್ನ ಅಜ್ಜಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಕಾಶ್ಮೀರದೊಂದಿಗೆ ವಿಶೇಷ ಸಂಬಂಧ ಹೊಂದಿದ್ದರು ಎಂದು ಹೇಳಿದರು.
ತಾನಿಲ್ಲಿಗೆ ತನ್ನ ಅಜ್ಜಿಯೊಂದಿಗೆ ಪುಟ್ಟ ಹುಡುಗನಾಗಿದ್ದಾಗ ಬಂದಿದ್ದೆ. ಅವರ ಹೃದಯದಲ್ಲಿ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವಿತ್ತು. ಪಂಡಿತ್ ಜವಾಹರ್‌ಲಾಲ್ ನೆಹರು ಮತ್ತು ಶೇಕ್ ಮುಹಮ್ಮದ್ ಅಬ್ದುಲ್ಲಾ ಅವರು ನಿಕಟ ಸ್ನೇಹಿತರಾಗಿದ್ದರು ಮತ್ತು ಇದೀಗ ತಾನು ಆ ಸ್ನೇಹವನ್ನು ಯುವ ಹಾಗೂ ಕ್ರಿಯಾತ್ಮಕ ನಾಯಕ ಒಮರ್ ಅಬ್ದುಲ್ಲಾ ಅವರೊಂದಿಗಿನ ಸ್ನೇಹದೊಂದಿಗೆ ನವೀಕರಿಸಲು ಬಂದಿದ್ದೇನೆ ಎಂದು ಹೇಳಿದರು. |