ತನ್ನನ್ನು ಸಂಸತ್ ದಾಳಿ ಪ್ರಕರಣದಲ್ಲಿ ನ್ಯಾಯಾಲಯ ದೋಷಿ ಎಂದು ತೀರ್ಮಾನಿಸಿರುವ ಅಫ್ಜಲ್ ಗುರುವಿನ ಪರ ವಕೀಲ ಎಂದು ತಪ್ಪಾಗಿ ಕರೆದಿರುವ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಅವರಿಗೆ ಪ್ರಖ್ಯಾತ ವಕೀಲರಾಗಿರುವ ರಾಮ್ ಜೇಠ್ಮಲಾನಿ ನೋಟೀಸು ನೀಡಿದ್ದಾರೆ.
"ನಿಮಗೆ ವಾಸ್ತವಾಂಶಗಳು ತಿಳಿದಿಲ್ಲ. ಅಫ್ಜಲ್ ಗುರುವಿನ ಕ್ಷಮಾಯಾಚನೆ ಅರ್ಜಿಯು, ಆತನ ವಿಚಾರಣೆ ವೇಳೆಗೆ ವಕೀಲರ ಪ್ರಾತಿನಿಧ್ಯ ಲಭಿಸಿಲ್ಲ ಎಂಬ ಅಂಶದ ಮೇಲೆ ರಾಷ್ಟ್ರಪತಿಗಳ ಎದುರು ಬಾಕಿಉಳಿದಿದೆ" ಎಂಬುದಾಗಿ ಜೇಠ್ಮಲಾನಿ ತಾನು ಕಳುಹಿಸಿರುವ ನೋಟೀಸಿನಲ್ಲಿ ಹೇಳಿದ್ದಾರೆ.
ಚುನಾವಣಾ ಸಮಾವೇಶದಲ್ಲಿ ಮಾಡಿರುವ ಆಪಾದನೆಗಳಿಗೆ 48 ಗಂಟೆಗಳೊಳಗಾಗಿ ಠಾಕ್ರೆ ಕ್ಷಮೆಯಾಚಿಸದಿದ್ದರೆ, ತಾನು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದ ಹಿರಿಯ ವಕೀಲ ಹೇಳಿದ್ದಾರೆ.
ಅದಗ್ಯೂ, ಇಂತಹ ಯಾವುದೇ ನೋಟೀಸನ್ನು ಠಾಕ್ರೆ ಇದುವರೆಗೆ ಪಡೆದಿಲ್ಲ ಎಂದು ಹೇಳಿರುವ ಠಾಕ್ರೆ ವಕೀಲರಾಗಿರುವ ಸಯಾಗಿ ನಗ್ರೆ ಅವರು, ನೋಟೀಸು ಪಡೆದ ತಕ್ಷಣ ಅದಕ್ಕೆ ಸೂಕ್ತ ಉತ್ತರ ನೀಡುವುದಾಗಿ ಹೇಳಿದ್ದಾರೆ.
ನೋಟಿಸಿನಲ್ಲಿ ಇರುವ ವಿಚಾರಕ್ಕೆ ತಕ್ಕಂತೆ ನಾವು ಸೂಕ್ತ ಉತ್ತರ ನೀಡಲಿದ್ದೇವೆ ಎಂದು ನಗ್ರೆ ಪ್ರತಿಕ್ರಿಯಿಸಿದ್ದಾರೆ.
ಠಾಕ್ರೆಯ ಭಯದಿಂದ 'ಕರಾಚಿ ಸ್ವೀಟ್ಸ್' ಎಂದಿದ್ದ ತಮ್ಮ ಅಂಗಡಿಯ ಹೆಸರನ್ನು 'ಕೃಷ್ಣ ಸ್ವೀಟ್ಸ್' ಎಂದು ಬದಲಿಸುವ ಮುಂಬೈ ಅಂಗಡಿಗಳ ಮಾಲೀಕರಂತೆ ತಾನಲ್ಲ ಎಂದು ಜೇಠ್ಮಲಾನಿ ತನ್ನ ನೋಟೀಸಿನಲ್ಲಿ ಹೇಳಿದ್ದಾರೆ. |