ಬೋಫೋರ್ಸ್ ಹಗರಣದ ಆರೋಪಿಯಾಗಿದ್ದ ಇಟಲಿ ಉದ್ಯಮಿ ಒಟ್ಟಾವಿಯಾ ಕ್ವಟ್ರೋಚಿ ಹೆಸರನ್ನು ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ತನ್ನ ಅತ್ಯಂತ ಬೇಕಾದವರ ಪಟ್ಟಿಯಿಂದ ತೆಗೆದು ಹಾಕಿದೆ ಎಂದು ಮಂಗಳವಾರ ಮಾಧ್ಯಮ ವರದಿಗಳು ತಿಳಿಸಿವೆ. ಚುನಾವಣಾ ಸಂದರ್ಭದಲ್ಲಿ ಸಿಬಿಐನ ಈ ಕ್ರಮವು ರಾಜಕೀಯ ಸಂಚಲನೆ ಮೂಡಿಸುವುದು ನಿಸ್ಸಂಶಯವಾಗಿದೆ.
ಸಿಬಿಐನ ಮೋಸ್ಟ್ ವಾಂಟೆಡ್ ಪಟ್ಟಿಯಿಂದ ಕ್ವಟ್ರೋಚಿ ಹೆಸರನ್ನು ತೆಗೆದು ಹಾಕಿರುವುದರಿಂದ ರಾಜೀವ್ ಗಾಂಧಿ ಕುಟುಂಬಕ್ಕೆ ನಿಕಟವಾಗಿದ್ದಾರೆಂದು ಹೇಳಲಾಗಿರುವ ಕ್ವಟ್ರೋಚಿ ವಿರುದ್ಧ ಹೊರಡಿಸಲಾಗಿದ್ದ ರೆಡ್ ಕಾರ್ನರ್ ನೋಟೀಸನ್ನು ವಾಪಾಸು ತೆಗೆದಂತಾಗಿದೆ.
ಅಟಾರ್ನಿ ಜನಲರ್ ಮಿಲನ್ ಬ್ಯಾನರ್ಜಿ ಅವರ ಕಾನೂನು ಸಲಹೆಯ ಆಧಾರದ ಮೇಲೆ ತನಿಖಾ ಸಂಸ್ಥೆಯು ಈ ಕ್ರಮ ಕೈಗೊಂಡಿರುವುದು ಸ್ಪಷ್ಟ. ರೆಡ್ ಕಾರ್ನರ್ ನೋಟೀಸು ಒಂದು 'ನಿರಂತರ ಮುಜುಗರ' ಎಂದು ಬ್ಯಾನರ್ಜಿ ಹೇಳಿದ್ದಾರೆಂದು ದೈನಿಕ ಒಂದು ಉಲ್ಲೇಖಿಸಿದೆ.
"ರೆಡ್ ಕಾರ್ನರ್ ನೋಟೀಸ್ ಮುಂದುವರಿಯುವುದಕ್ಕೆ ಯಾವುದೇ ಆಧಾರವಿಲ್ಲದ ಕಾರಣ ಇಂಟರ್ ಪೋಲ್ ಮಟ್ಟದಲ್ಲಿ ಇದನ್ನು ಸರಿಪಡಿಸಲು ಸಿಬಿಐ ಬಾಧ್ಯವಾಗಿದೆ" ಎಂದು ಬ್ಯಾನರ್ಜಿ ಹೇಳಿದ್ದಾರೆ. ಅಲ್ಲದೆ, ರೆಡ್ ಕಾರ್ನರ್ ನೋಟೀಸು ಹಿಂತೆಗೆಯಲು ತಕ್ಷಣದ ಕ್ರಮಗಳನ್ನು ಕೈಗೊಳ್ಳಬೇಕೆಂಬ ದೃಢ ಅಭಿಪ್ರಾಯವನ್ನು ಹೊಂದಿರುವುದಾಗಿ ಅವರು ಹೇಳಿದ್ದಾರೆ.
ಈ ಬೆಳವಣಿಗೆಗಳ ಕುರಿತು ಪ್ರಕಣವು ಬಾಕಿಇರುವ ದೆಹಲಿ ನ್ಯಾಯಾಲಯಕ್ಕೆ ಎಪ್ರಿಲ್ 30ರಿಂದು ಮಾಹಿತಿ ನೀಡಲಾಗುವುದು ಎಂದು ದೈನಿಕದ ವರದಿ ತಿಳಿಸಿದೆ.
ಅಕ್ಟೋಬರ್ 2008ರಲ್ಲಿ ಕ್ವಟ್ರೋಚಿ ಅವರ ವಕೀಲರು, ರೆಡ್ ಕಾರ್ನರ್ ನೋಟೀಸ್ ಕುರಿತ ಕಾನೂನಿ ಮೌಲ್ಯವನ್ನು ಪ್ರಶ್ನಿಸಿದ್ದರು. 1997ರ ಫೆಬ್ರವರಿ 6ರಂದು ನೀಡಲಾಗಿರುವ ಬಂಧನ ವಾರಂಟ್ ಸಿಂಧುವಲ್ಲ ಎಂಬುದಾಗಿ ಸಿಬಿಐ ನಿರ್ದೇಶಕ ಎಸ್.ಕೆ. ಶರ್ಮಾ ಹೇಳಿದ್ದರು. ಬಂಧನ ವಾರಂಟ್ ಆಧಾರದಲ್ಲಿ ರೆಡ್ ಕಾರ್ನರ್ ನೋಟೀಸ್ ನೀಡಲಾಗಿತ್ತು.
ಬೋಫೋರ್ಸ್ ಶಸ್ತ್ರಾಸ್ತ್ರ ಹಗರಣವು 80ರ ದಶಕದ ಅತಿ ದೊಡ್ಡ ಭ್ರಷ್ಟಾಚಾರ ಹಗರಣವಾಗಿದೆ. 155 ಎಂಎಂ ಫೀಲ್ಡ್ ಹೋವಿಟ್ಸರ್ ಪೂರೈಕೆಯ ಬಿಡ್‌ಗಾಗಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಇತರ ಹಲವರು ದೊಡ್ಡ ಮೊತ್ತದ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಇದು 150 ಶತಕೋಟಿ ರೂಪಾಯಿಗಳ ಹಗರಣವಾಗಿದೆ.
ಇತ್ತೀಚೆಗೆ ಪತ್ರಿಕಾಗೋಷ್ಠಿಯೊಂದರಲ್ಲಿ ಬೋಪೋರ್ಸ್ ಕುರಿತು ಕ್ಷಮೆಯಾಚಿಸುವಿರೇ ಎಂಬುದಾಗಿ ಕಾಂಗ್ರೆಸ್‌ನ ಯುವನಾಯಕ ಹಾಗೂ ರಾಜೀವ್ ಗಾಂಧಿ ಪುತ್ರ ರಾಹುಲ್ ಗಾಂಧಿ ಅವರನ್ನು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಅವರು, ಯಾಕೆ ಕ್ಷಮೆಯಾಚಿಸಬೇಕು? ಅದೊಂದು ಮುಗಿದ ಅಧ್ಯಾಯವಾಗಿದ್ದು, ರಾಜಕೀಯ ಕಾರಣಗಳಿಗಾಗಿ ವಿರೋಧ ಪಕ್ಷಗಳು ಜೀವಂತವಾಗಿಸಿವೆ ಎಂದು ಗರಂ ಆಗಿ ಹೇಳಿದ್ದರು.
ಬಿಜೆಪಿ ಪ್ರತಿಕ್ರಿಯೆ ರೆಡ್ ಕಾರ್ನರ್ ನೋಟೀಸ್ ವಾಪಸಾತಿಯು ಕ್ವಟ್ರೋಚಿಗೆ ಕಾಂಗ್ರೆಸ್‌ನ ಪ್ರಥಮ ಕುಟುಂಬದ ಕೊಡುಗೆ ಎಂದು ಈ ಬೆಳವಣಿಗೆಯನ್ನು ಬಿಜೆಪಿ ಕಟುವಾಗಿ ಟೀಕಿಸಿದೆ. ಅಲ್ಲದೆ ಅಧಿಕಾರದಲ್ಲಿರುವ ಕಾಂಗ್ರಸ್ ತನಿಖಾ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ದೂರಿದೆ. |