ತನ್ನ ಅತ್ಯಂತ ಬೇಕಾಗಿರುವ ಪಟ್ಟಿಯಿಂದ ಬೋಫೋರ್ಸ್ ಹಗರಣದ ಆರೋಪಿ ಒಟ್ಟಾವಿಯೋ ಕ್ವಟ್ರೋಚಿ ಹೆಸರನ್ನು ಬಿಟ್ಟಿರುವ ಸಿಬಿಐ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ನಾಯಕ ಎಲ್.ಕೆ. ಆಡ್ವಾಣಿ, ಈ ಪ್ರಕರಣದ ಕುರಿತು ಕಳೆದ ಐದು ವರ್ಷಗಳಲ್ಲಿ ಸಿಬಿಐ ಪಾತ್ರದ ಕುರಿತು ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
"ಇದೊಂದು ಗಂಭೀರವಾದ ನಿರ್ಧಾರವಾಗಿದೆ. ಕ್ವಟ್ರೋಚಿ ಮಾತ್ರವಲ್ಲ ಕಳೆದ ಐದು ವರ್ಷಗಳಲ್ಲಿ ಇಡಿಯ ಸಿಬಿಐ ಪಾತ್ರದ ಕುರಿತು ತನಿಖೆಯಾಗಬೇಕಿದೆ. ಇದೊಂದು ಅತ್ಯಂತ ಗಂಭೀರ ಪ್ರಕರಣವಾಗಿದೆ. ಸಿಬಿಐ ರಾಜಕಾರಣಿಗಳ ಕೈಗೊಂಬೆಯಾಗಿದೆ" ಎಂದು ಅವರು ದೂರಿದರು.
ಅವರು ತಮ್ಮ ಚುನಾವಣಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದರು.
ಸಿಬಿಐ ಪಟ್ಟಿಯಿಂದ ಕ್ವಟ್ರೋಚಿ ಹೆಸರನ್ನು ತೆಗೆದು ಹಾಕಿರುವ ಕ್ರಮದಿಂದಾಗಿ, ಕ್ವಟ್ರೋಚಿ ವಿರುದ್ಧವಿದ್ದ ರೆಡ್ ಕಾರ್ನರ್ ನೋಟೀಸ್ ಹಿಂತೆಗೆದುಕೊಂಡಂತಾಗಿದೆ.
ಸಿಬಿಐ ತನಿಖೆಯಿಂದ ಕ್ವಟ್ರೋಚಿ ಕೈಬಿಟ್ಟಿರುವ ಸುದ್ದಿ ಹೊರಬೀಳುತ್ತಿರುವಂತೆ ಪ್ರತಿಕ್ರಿಯಿಸಿದ್ದ ಬಿಜೆಪಿ, ಇದು ಕಾಂಗ್ರೆಸ್‌ನ ಪ್ರಥಮ ಕುಟುಂಬವು ಕ್ವಟ್ರೋಚಿಗೆ ನೀಡಿ ಉಡುಗೊರೆ ಎಂದು ಪ್ರತಿಕ್ರಿಯಿಸಿತ್ತು. |