ಮುಂಬೈ ದಾಳಿಕೋರ ಅಜ್ಮಲ್ ಅಮೀರ್ ಕಸಬ್ ಪ್ರಾಪ್ತವಯಸ್ಕ ಎಂಬುದಾಗಿ ಅರ್ಥರ್ ರೋಡ್ ಜೈಲಿನಲ್ಲಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ವರದಿಯಲ್ಲಿ ವೈದ್ಯರು ಹೇಳಿದ್ದಾರೆ.ಫಾರೆನ್ಸಿಕ್ ಡೆಂಟಲ್ ಅನಾಲಿಸಿಸ್, ಒಸ್ಸಿಫಿಕೇಶನ್ ಟೆಸ್ಟ್ ಹಾಗೂ ಎಕ್ಸ್ ರೇ ಆಧಾರಗಳ ಮೇಲೆ ಪಾಕಿಸ್ತಾನಿ ಉಗ್ರ ಕಸಬ್ 20 ವರ್ಷಗಳ ವಯಸ್ಸು ದಾಟಿದ್ದಾನೆ ಎಂಬ ನಿರ್ಧಾರಕ್ಕೆ ಬಂದಿರುವುದಾಗಿ ವಿಶೇಷ ನ್ಯಾಯಾಧೀಶ ಎಂ.ಎಲ್. ತಹಿಲ್ಯಾನಿ ಅವರಿಗೆ ಸಲ್ಲಿಸಿರುವ ವರದಿಯಲ್ಲಿ ಹೇಳಲಾಗಿದೆ.ಜೆಜೆ ಆಸ್ಪತ್ರೆಯ ನಾಲ್ವರು ವೈದ್ಯರ ತಂಡವು ಕಸಬ್ ಪರೀಕ್ಷೆಯನ್ನು ನಡೆಸಿದ್ದು, ಈ ವರದಿಯನ್ನು ಮಂಗಳವಾರ ಅಪರಾಹ್ನ ನ್ಯಾಯಾಲಯಕ್ಕೆ ಸಲ್ಲಿಸಲಾಯಿತು.ಕಸಬ್ ವಯಸ್ಸನನ್ನು ಪತ್ತೆ ಹಚ್ಚಲು ತನಿಖೆ ನಡೆಸುವಂತೆ ನ್ಯಾಯಾಲಯವು ಎಪ್ರಿಲ್ 24ರಂದು ಆದೇಶ ನೀಡಿತ್ತು. ಕಸಬ್ ಪರ ವಕೀಲ ಅಬ್ಬಾಸ್ ಖಾಜ್ಮಿ, ಮುಂಬೈ ದಾಳಿಯ ವೇಳೆಗೆ ಕಸಬ್ 17 ವರ್ಷ ವಯಸ್ಸಿನವನಾಗಿದ್ದು, ಆತ ಬಾಲಾಪರಾಧಿ ಆಗಿರುವ ಕಾರಣ ಆತನನ್ನು ಬಾಲಾಪರಾಧಿಗಳ ನ್ಯಾಯಾಲಯದಲ್ಲಿ ವಿಚಾರಿಸಬೇಕು ಎಂದು ಹೇಳಿದ್ದರು.ಎಪ್ರಿಲ್ 28ರಂದು ವೈದ್ಯಕೀಯ ವರದಿಯನ್ನು ಸಲ್ಲಿಸುವಂತೆ ನ್ಯಾಯಾಧೀಶರು ಸೂಚಿಸಿದ್ದರು. ಕಸಬ್ ವಯಸ್ಸಿನ ದಾಖಲೆಗಳ ಪತ್ತೆಗಾಗಿ ತಾನು ಪಾಕಿಸ್ತಾನಕ್ಕೆ ತೆರಳುವುದಾಗಿ ಕಸಬ್ ವಕೀಲರು ಹೇಳಿದ್ದರು. ಆದರೆ ನ್ಯಾಯಾಲಯವು ವೈದ್ಯರ ತಂಡದ ವೈದ್ಯಕೀಯ ಪರೀಕ್ಷೆಗಳ ಮೂಲಕ ಕಸಬ್ ವಯಸ್ಸನ್ನು ಪತ್ತೆ ಹಚ್ಚುವಂತೆ ಸೂಚಿಸಿತ್ತು.ಕಸಬ್‌ನ ವಯಸ್ಸು ಪ್ರಕರಣದ ತೀರ್ಪಿನ ಮೇಲೆ ನೇರ ಪರಿಣಾಮ ಬೀರಲಿದೆ. ಒಂದೊಮ್ಮೆ ಕಸಬ್ ಅಪ್ರಾಪ್ತನೆಂಬುದು ಸಾಬೀತಾದರೆ ಆತನಿಗೆ ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ಮಾತ್ರ ವಿಧಿಸಬಹುದಾಗಿದೆ. ವೈದ್ಯಕೀಯ ವರದಿಗೆ ಪ್ರತಿಕ್ರಿಯಿಸಿರುವ ಕಸಬ್ ವಕೀಲ ಅಬ್ಬಾಸ್ ಅವರು ಕಸಬ್‌ಗೆ 20 ವರ್ಷವೆಂದಾದರೆ, ದಾಳಿ ನಡೆಸುವ ವೇಳೆಗೆ ಆತನಿಗೆ ಹತ್ತೊಂಬತ್ತುವರೆ ವರ್ಷವಾಗಿತ್ತು. ಆರುತಿಂಗಳ ವಯಸ್ಸು 'ಮಾರ್ಜಿನ್ ಆಫ್ ಎರರ್ ' ಆಗಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. |