ಉದ್ಯಮಿ ಅನಿಲ್ ಅಂಬಾನಿಯವರ ಹೆಲಿಕಾಫ್ಟರ್‌ನ ಇಂಧನ ಟ್ಯಾಂಕಿನಲ್ಲಿ ಕಲ್ಲುಗಳನ್ನ ಪತ್ತೆಮಾಡಿದ್ದ ಭರತ್ ಬೋರ್ಗೆ ಎಂಬ ವ್ಯಕ್ತಿಯ ಮೃತದೇಹವು ಮಂಗಳವಾರ ಮುಂಬೈನ ವಿಲೆ ಪಾರ್ಲೆ ಮತ್ತು ಅಂಧೇರಿ ಸಬ್ಅರ್ಬನ್ ರೈಲ್ವೇ ನಿಲ್ದಾಣಗಳ ನಡುವೆ ಪತ್ತೆ ಯಾಗಿದೆ ಎಂದು ರೈಲ್ವೇ ಪೊಲೀಸರು ಹೇಳಿದ್ದಾರೆ.
ಬೋರ್ಗೆ ಅವರ ದೇಹವನ್ನು ಪೊಲೀಸ್ ಒಬ್ಬರು ಪತ್ತೆಮಾಡಿದ್ದಾರೆ. ಅವರ ಕಿಸೆಯಲ್ಲಿ ಪತ್ರ ಒಂದು ಪತ್ತೆಯಾಗಿದೆ ಎಂಬುದಾಗಿ ಪೊಲೀಸ್ ಆಯುಕ್ತ ಎ.ಕೆ.ಶರ್ಮಾ ಹೇಳಿದ್ದಾರೆ. ಅವರು ಪತ್ರದಲ್ಲಿನ ವಿವರಗಳನ್ನು ನೀಡಲು ನಿರಾಕರಿಸಿದ್ದು, ಮೃತದೇಶವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ಕಳುಹಿಸಿರುವುದಾಗಿ ತಿಳಿಸಿದರು.
ಮಂಗಳವಾರ ಸಾಯಂಕಾಲ ಬೋರ್ಗೆ ಅವರ ಮೃತದೇಹ ಪತ್ತೆಯಾಗಿರುವುದಾಗಿ ರೈಲ್ವೇ ಪೊಲೀಸ್ ಮೂಲಗಳು ತಿಳಿಸಿವೆ. ಬೋರ್ಗೆ ಮೇಲೆ ವಿಲೆ ಪಾರ್ಲೆ ಸಮೀಪ ರೈಲು ಹರಿದಿರುವುದಾಗಿ ಶಂಕಿಸಲಾಗಿದೆ. ಅವರ ಬಳಿ ಗುರುತು ಚೀಟಿ ಪತ್ತೆಯಾಗಿದ್ದು, ಅವರು ಅಂಬಾನಿ ಅವರ ಹೆಲಿಕಾಫ್ಟರನ್ನು ನಿರ್ವಹಿಸುವ ಏರ್‌ವರ್ಕ್ಸ್ ಸಂಸ್ಥೆಯ ನೌಕರನೆಂಬುದು ದೃಢಪಟ್ಟಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದು ಆತ್ಮಹತ್ಯೆಯೇ ಅಥವಾ ಕೊಲೆಯೇ ಇಲ್ಲವೇ ಅಪಘಾತವೇ ಎಂಬುದನ್ನು ಪೊಲೀಸರು ತಕ್ಷಣದಲ್ಲಿ ದೃಢಪಡಿಸಿಲ್ಲ.
ಅಂಬಾನಿ ಅವರ ಹೆಲಿಕಾಫ್ಟರ್‌ನ ಇಂಧನ ಟ್ಯಾಂಕಿನಲ್ಲಿ ಕಲ್ಲುಗಳು ಪತ್ತೆಯಾಗಿದ್ದು, ಒಂದೊಮ್ಮೆ ಹೆಲಿಕಾಫ್ಟರ್ ಅದೇ ಸ್ಥಿತಿಯಲ್ಲಿ ಹಾರುತ್ತಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂಬ ಕುರಿತು ಪತ್ತೆ ಮಾಡಲು, ಈ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು ನಾಗರಿಕ ವಾಯುಯಾನ ಸಂಸ್ಥೆಯ ಪ್ರಧಾನ ನಿರ್ದೇಶಕ ಮತ್ತು ವಾಯುಯಾನ ತಜ್ಞರ ಅಭಿಪ್ರಾಯ ಪಡೆದಿದ್ದಾರೆ.
ಅನಿಲ್ ಅಂಬಾನಿ ಅವರ ಹೆಲಿಕಾಫ್ಟರ್ ಧ್ವಂಸಯತ್ನ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ 45ರ ಹರೆಯ ಬೋರ್ಗೆ ಅವರನ್ನು ಸೋಮವಾರವಷ್ಟೆ ತನಿಖಾತಂಡ ವಿಚಾರಣೆಗೆ ಒಳಪಡಿಸಿತ್ತು. ಇದೀಗ ಅವರ ಸಾವಿಗೆ ನಿಖರ ಕಾರಣ ಏನು ಮತ್ತು ಅವರ ಕಿಸೆಯಲ್ಲಿ ಪತ್ತೆಯಾಗಿರುವ ಪತ್ರದ ನಿಜತ್ವದ ಕುರಿತು ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. |