ಇಲ್ಲಿನ ವ್ಯಾಸರಪಾಡಿ ರೈಲ್ವೇ ನಿಲ್ದಾಣದಲ್ಲಿ ಬುಧವಾರ ಮುಂಜಾನೆ ಭೀಕರ ರೈಲು ಅಪಘಾತ ಸಂಭವಿಸಿದ್ದು ಕನಿಷ್ಠ ಏಳು ಮಂದಿ ಸಾವನ್ನಪ್ಪಿದ್ದು, ಇತರ 20 ಮಂದಿ ಗಾಯಗೊಂಡಿದ್ದಾರೆ. ತಪ್ಪುಹಾದಿಯಲ್ಲಿ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಸಾಗಿದ ಲೋಕಲ್ ರೈಲು ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿಯಾಗಿದ್ದು, ರೈಲ್ವೇಯ ನಿರ್ಲಕ್ಷ್ಯವು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ.
ಈ ದುರಂತವು ಮುಂಜಾನೆ ಸುಮಾರು ಐದೂವರೆ ಗಂಟೆಗೆ ಸಂಭವಿಸಿದೆ. ನಿಲ್ದಾಣದಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಲೋಕಲ್ ರೈಲು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಚೆನ್ನೈ-ತಿರುವಲ್ಲೂರ್ ತಪ್ಪು ಮಾರ್ಗದಲ್ಲಿ ಸಾಗಿದ ರೈಲು ನಿಂತಿದ್ದ ರೈಲಿಗೆ ಡಿಕ್ಕಿಯಾಗಿದ್ದು, ಐದು ಕೋಚ್‌ಗಳಿಗೆ ಬೆಂಕಿ ಹತ್ತಿಕೊಂಡಿತು. ತಕ್ಷಣವೇ ಪರಿಹಾರ ಸಿಬ್ಬಂದಿಗಳು ಧಾವಿಸಿದ್ದು ಕ್ರಮ ಪರಿಹಾರ ಕ್ರಮ ಕೈಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತಕ್ಕೀಡಾಗಿರುವ ರೈಲು ನಿಗದಿತ ಸಮಯಕ್ಕಿಂತ ಸುಮಾರು 25 ನಿಮಿಷಗಳ ಮುಂಚಿತವಾಗಿ ಇದ್ದಕ್ಕಿದ್ದಂತೆ ಸೆಂಟ್ರಲ್ ರೈಲ್ವೇ ಸ್ಟೇಶನ್‌ನಿಂದ ಹೊರಟಿದ್ದು ನಂತರದ ಮೂರು ನಿಲ್ದಾಣಗಳಲ್ಲಿ ನಿಲ್ಲದೆ ಚಲಿಸಿ, ತಪ್ಪು ಮಾರ್ಗದ ಮೂಲಕ ಸಾಗಿ ನಿಂತಿದ್ದ ರೈಲಿಗೆ ಡಿಕ್ಕಿ ಹೊಡೆದಿದೆ.
ಅನಧಿಕೃತ ವ್ಯಕ್ತಿ ರೈಲನ್ನು ಚಲಾಯಿಸಿ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಇನ್ನೊಂದು ಮೂಲದ ಪ್ರಕಾರ ನಿಂತಿದ್ದ ರೈಲಿನ ಗುಂಡಿಯನ್ನು ಕಿಡಿಗೇಡಿಯೊಬ್ಬ ಅದುಮಿದ ಕಾರಣ ಈ ಅಪಘಾತ ಸಂಭವಿಸಿದೆ ಎಂದೂ ಹೇಳಲಾಗುತ್ತಿದ್ದರೂ, ಅಧಿಕೃತಮಾಹಿತಿ ಇನ್ನಷ್ಟೆ ಹೊರಬೀಳಬೇಕಿದೆ.
ಅಪಘಾತಕ್ಕೀಡಾಗಿರುವ ರೈಲು ಖಾಲಿಯಾಗಿದ್ದು, ರೈಲಿನಲ್ಲಿದ್ದವರು ಅನಧಿಕೃತ ಪ್ರಯಾಣಿಕರು ಎಂಬುದಾಗಿ ದಕ್ಷಿಣ ರೈಲ್ವೇಯ ನೀಲು ಇತ್ರಾ ತಿಳಿಸಿದ್ದಾರೆ.
|