ಆನಂದ್(ಗುಜರಾತ್): "ಒಂದೆಡೆ ತನ್ನ ಸಂಬಂಧಿ, ಇಟಲಿಯ ಉದ್ಯಮಿ ಒಟ್ಟಾವಿಯೋ ಕ್ವಟ್ರೋಚಿಗೆ ಸಿಬಿಐನಿಂದ ಕ್ಲೀನ್ ಚಿಟ್ ಕೊಡಿಸಿದರೆ, ಇನ್ನೊಂದೆಡೆ ಮಣ್ಣಿನ ಮಗನಾದ ನನ್ನನ್ನು ಜೈಲಿಗಟ್ಟಲು ಸಂಚು ಹೂಡಲಾಗುತ್ತಿದೆ, ಇದು ಸೋನಿಯಾ ದರ್ಬಾರ್" ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ.
ಗುಜರಾತ್ ಗಲಭೆಯಲ್ಲಿ ಮೋದಿ ಪಾತ್ರದ ಕುರಿತು ತನಿಖೆ ನಡೆಸಲು ಸುಪ್ರೀಂಕೋರ್ಟ್ ಆದೇಶ ನೀಡಿದ ಬಳಿಕ, ಈ ಕುರಿತು ಸಾರ್ವಜನಿಕವಾಗಿ ಪ್ರತಿಕ್ರಿಯಿಸಿರುವ ಮೋದಿ, ತನ್ನನ್ನು ಕಂಬಿಗಳ ಹಿಂದೆ ತಳ್ಳಲು ಕಾಂಗ್ರೆಸ್ ಸಂಚು ಹೂಡುತ್ತಿದೆ ಎಂದು ದೂರಿದ್ದಾರೆ.
ಗುಜರಾತಿನ ಆನಂದ್ ಎಂಬಲ್ಲಿ ಮಂಗಳವಾರ ಚುನಾವಣಾ ಪ್ರಚಾರ ಮಾಡುತ್ತಿದ್ದ ರಣೋತ್ಸಾಹದ ಮೋದಿ, ಸುಪ್ರೀಂಕೋರ್ಟ್ ಆದೇಶದ ಹಿಂದೆ ಕಾಂಗ್ರೆಸ್ ಕೈವಾಡ ಇರಬಹುದು ಎಂಬ ಸುಳಿವು ನೀಡುವಂತಹ ಗಂಭೀರ ಆರೋಪವನ್ನು ಮಾಡಲೂ ಹಿಂಜರಿಯಲಿಲ್ಲ.
ಮಾಜಿ ಸಂಸದ ದಿವಂಗತ ಇಶಾನ್ ಜಾಫ್ರಿ ಪತ್ನಿ ಜಾಕಿಯಾ ಜಾಫ್ರಿ ಹಾಗೂ ಸಾಮಾಜಸೇವಾ ಕಾರ್ಯಕರ್ತೆ ತೀಸ್ತಾ ಸೇತ್ವಲಾಡ್ ಅವರು ಸಲ್ಲಿಸಿರುವ ಅರ್ಜಿಯ ಹಿನ್ನಲೆಯಲ್ಲಿ ಮೋದಿ ಪಾತ್ರವೇನು ಎಂಬ ಕುರಿತು ತನಿಖೆ ನಡೆಸುವಂತೆ ನ್ಯಾಯಾಲಯ ವಿಶೇಷ ತನಿಖಾ ತಂಡಕ್ಕೆ ಆದೇಶ ನೀಡಿದೆ. ಗೋಧ್ರಾ ನರಮೇಧಕ್ಕೆ ಸಂಬಂಧಿಸಿದಂತೆ ಮೋದಿ ಅಲ್ಲದೆ ಇತರ 62 ಮಂದಿಯ ಪಾತ್ರದ ಕುರಿತೂ ತನಿಖೆ ನಡೆಸಲು ಸೂಚಿಸಲಾಗಿದೆ.
"ಮತ್ತೊಮ್ಮೆ ಸುಪ್ರೀಂ ಕೋರ್ಟ್ ನನ್ನನ್ನು ನೆನಪಿಸಿಕೊಂಡಿದೆ. ನಾನೇನು ಮಾಡಬೇಕೆಂದು ನೀವೇ ಹೇಳಿ. ಹದಿನೈದು ದಿನಗಳ ಹಿಂದೆ, ಕಾಂಗ್ರೆಸ್ ನಾಯಕ, ಯುಪಿಎ ಸರ್ಕಾರದ ಸಚಿವ ಹಾಗೂ ಹಿರಿಯ ವಕೀಲ ಕಪಿಲ್ ಸಿಬಾಲ್ ಅವರು ಮೋದಿ ಜೈಲಿಗೆ ತೆರಳಲು ಸಿದ್ಧವಾಗಬೇಕು ಎಂದು ಹೇಳಿದ್ದರು. ಮತ್ತು ಸರಿಯಾಗಿ 15 ದಿವಸಗಳ ಬಳಿಕ ಸುಪ್ರೀಂ ಕೋರ್ಟ್ ನನ್ನ ವಿರುದ್ಧ ಕುಣಿಕೆ ಬಿಗಿಗೊಳಿಸಿದೆ. ಇದರ ಅರ್ಥವೇನು? ಕಾಂಗ್ರೆಸ್ ನನ್ನ ವಿರುದ್ಧ ಸಂಚು ಹೂಡಿದೆಯೇ ಎಂಬ ಪ್ರಶ್ನೆ ನನ್ನ ಮನದಲ್ಲಿ ಮೂಡುತ್ತಿದೆ" ಎಂದು ಅವರು ಹೇಳಿದರು.
ಒಂದೆಡೆ ಸೋನಿಯಾ ಅವರ ವಿದೇಶಿ ಸಂಬಂಧಿಗೆ ಸಿಬಿಐ ಕ್ಲೀನ್ ಚಿಟ್ ನೀಡಿದೆ. ಸಿಬಿಐ ಯಾರ ನಿಯಂತ್ರಣದಲ್ಲಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಇನ್ನೊಂದೆಡೆ ಮಣ್ಣಿನ ಮಗನಾದ ನನ್ನನ್ನು ಜೈಲಿಗೆ ತಳ್ಳಲು ಸಂಚು ರೂಪಿಸಲಾಗಿದೆ ಎಂದು ಅವರು ನುಡಿದರು.
"ನಾನು ಈ ನೆಲದ ಜನತೆಗಾಗಿ ಜೈಲಿಗೆ ಹೋಗಲು ಹೆದರುವುದಿಲ್ಲ, ಇಷ್ಟೆಲ್ಲ ನಡೆದರೂ, ಭಯೋತ್ಪಾದನೆಯ ವಿರುದ್ಧ ಹೋರಾಡುವುದನ್ನು ನಾನು ನಿಲ್ಲಿಸುವುದಿಲ್ಲ. ದೆಹಲಿಯು ನನ್ನನ್ನು ಯಾವ ಜೈಲಿನಲ್ಲೂ ಇರಿಸಬಹುದು, ಆದರೆ ನನ್ನನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ" ಎಂದು ಅವರು ತಿಳಿಸಿದರು. |