ಹಂದಿಜ್ವರವು ಹತೋಟಿ ಮೀರಿ ವ್ಯಾಪಿಸುತ್ತಿದೆ ಎಂಬುದಾಗಿ ವಿಶ್ವಸಂಸ್ಥೆಯು ಹೇಳಿರುವ ಹಿನ್ನೆಲೆಯಲ್ಲಿ ಭಾರತವು, ಸೋಂಕು ಹಬ್ಬುವಿಕೆ ತಡೆಯಲು ಭಾರೀ ಕ್ರಮಕೈಗೊಂಡಿದ್ದು, ಅಮೆರಿಕ, ಕೆನಡಾ ಹಾಗೂ ಮೆಕ್ಸಿಕೋದಿಂದ ಬರುತ್ತಿರವ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ ಇರಿಸಿದ್ದು ಅವರನ್ನು ತಪಾಸಣೆಗೊಳಪಡಿಸಲಾಗುತ್ತಿದೆ.
ಮೆಕ್ಸಿಕೋಗೆ ಅನಗತ್ಯ ಪ್ರಯಾಣ ಮಾಡದಿರುವಂತೆ ಅಮೆರಿಕ ತನ್ನ ಪ್ರಜೆಗಳಿಗೆ ಸಲಹೆ ನೀಡಿದೆ. ಅಲ್ಲದೆ ಗಡಿಪ್ರದೇಶಗಳಲ್ಲಿ ತಪಾಸಣೆಯನ್ನು ಹೆಚ್ಚಿಸಿದೆ. ಇದೇ ವೇಳೆ ಮೆಕ್ಸಿಕೋ ಹಾಗೂ ಅಮೆರಿಕದ ಕೆಲವು ಭಾಗಗಳಿಗೆ ಪ್ರಯಾಣ ಮಾಡದಿರುವಂತೆ ಯುರೋಪ್ ಯೂನಿಯನ್‌ನ ಆರೋಗ್ಯ ಆಯುಕ್ತರು ಸಲಹೆ ಮಾಡಿದ್ದಾರೆ.
ಹಂದಿಜ್ವರಕ್ಕೆ ಕಾರಣವಾಗಿರುವ ಎಚ್1ಎನ್1 ವೈರಸ್ ಹಕ್ಕಿಜ್ವರಕ್ಕಿಂತಲೂ ಅಪಾಯಕಾರಿ ಎಂದು ಹೇಳಲಾಗಿದೆ. ಇದೀಗ ಭುಗಿಲೆದ್ದಿರುವ ಹಂದಿಜ್ವರವು, ಮೊದಲೆ ಕಂಗೆಟ್ಟಿರುವ ಅಮೆರಿಕದ ಆರ್ಥಿಕತೆಗೆ ಇನ್ನಷ್ಟು ಹೊಡೆತ ನೀಡಲಿದೆ ಎಂದು ಅಂದಾಜಿಸಲಾಗಿದೆ. ಪ್ರವಾಸೋದ್ಯಮ, ಆಹಾರ ಹಾಗೂ ಸಾರಿಗೆ ಉದ್ಯಮಗಳಿಗೆ ಇದು ಏಟು ನೀಡಲಿದೆ.
ಹಂದಿಜ್ವರದ ಕೇಂದ್ರ ಸ್ಥಾನವಾಗಿರುವ ಮೆಕ್ಸಿಕೋದಲ್ಲಿ ಇದೀಗಾಲೇ ಈ ರೋಗದಿಂದ 149 ಮಂದಿ ಸಾವನ್ನಪ್ಪಿದ್ದು, ಸುಮಾರು 2000 ಮಂದಿ ರೋಗಪೀಡಿತರಾಗಿದ್ದಾರೆ ಎಂದು ಅಂದಾಜಿಸಲಾಗಿದೆ.
ಅಮೆರಿಕದಲ್ಲಿ ಒಟ್ಟು 48 ಪ್ರಕರಣಗಳು ಪತ್ತೆಯಾಗಿವೆ. ಒಹಿಯೋ, ಕನ್ಸಾಸ್, ಟೆಕ್ಸಾಸ್, ಕ್ಯಾಲಿಫೋರ್ನಿಯಾಗಳಲ್ಲಿ ಎಚ್1ಎನ್1 ವೈರಸ್ ಹರಡಿದೆ. ಕೆನಡಾದಲ್ಲಿ ಆರು, ಸ್ಕಾಟ್‌ಲ್ಯಾಂಡಿನಲ್ಲಿ ಎರಡು ಹಾಗೂ ಸ್ಪೇನ್‌ನಲ್ಲಿ ಒಂದು ಪ್ರಕರಣ ಸೇರಿದಂತೆ ವಿಶ್ವಾದ್ಯಂತ 77 ಪ್ರಕರಣಗಳು ಪತ್ತೆಯಾಗಿವೆ.
ಹಂದಿಯ ಮೂಲದಿಂದ ಹೊರಟಿರುವ ಈ ಇನ್ ಫ್ಲುಯೆಂಜಾ ಸೋಂಕ ಸಾಮಾನ್ಯವಾಗಿ ಕಂಡುಬರುವ ಫ್ಲೂ ಜ್ವರದ ಲಕ್ಷಣಗಳನ್ನೇ ಹೊಂದಿರುತ್ತದೆ. ಜ್ವರ, ಮೈಕೈ ನೋವು, ತಲೆ ನೋವು, ಗಂಟಲು ನೋವು, ಕೆಮ್ಮು ಇತ್ಯಾದಿ ಲಕ್ಷಣಗಳು ಸಾಮಾನ್ಯವಾಗಿದ್ದು, ವಾಂತಿ, ಬೇಧಿ, ನ್ಯುಮೋನಿಯಾ ಇತ್ಯಾದಿ ತೊಂದರೆಗಳು ಅಪರೂಪದಲ್ಲಿ ಕಂಡು ಬರುವ ಸಾಧ್ಯತೆಗಳು ಇವೆ ಎಂದು ತಜ್ಞರು ಹೇಳುತ್ತಾರೆ.
ಸೋಂಕು ತಗಲಿರಬಹುದಾದ ರೋಗಿಗಳಿಂದ ದೂರವಿರುವುದು, ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳುವುದು, ಮುಖ ಹಾಗೂ ಕಣ್ಣುಗಳನ್ನು ಅಶುದ್ಧವಾದ ಕೈಗಳಿಂದ ಒರೆಸದಿರುವುದು ಇವೇ ಮೊದಲಾದ ಸರಳ ಕ್ರಮಗಳಿಂದ ಸೋಂಕನ್ನು ತಡೆಯಬಹುದಾಗಿದ್ದು ಎಚ್ಚರಿಕೆ ವಹಿಸುವುದರಿಂದ ಸೋಂಕು ತಗುಲುವಿಕೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ. |