ಮುಂಬೈನರಮೇಧ ನಡೆಸಿದ ವೇಳೆ ಪೊಲೀಸರ ಕೈಗೆ ಜೀವಂತವಾಗಿ ಸಿಕ್ಕಿಬಿದ್ದಿರುವ ಪಾತಕಿ ಅಜ್ಮಲ್ ಅಮೀರ್ ಕಸಬ್, ತನಗೆ ಓದಲು ಉರ್ದು ಪತ್ರಿಕೆ, ಪಾಕಿಸ್ತಾನಿ ಪರ್ಫ್ಯೂಮ್ ಹಾಗೂ ಹಲ್ಲುಜ್ಜುವ ಪೇಸ್ಟ್ ಒದಗಿಸಬೇಕು ಮತ್ತು ತನಗೆ ಸಾಯಂಕಾಲದ ಹೊತ್ತಿನಲ್ಲಿ ಜೈಲಿನ ವೆರಂಡಾದಲ್ಲಿ ಸುತ್ತಾಡಲು ಅವಕಾಶ ನೀಡಬೇಕು ಎಂಬ ಬೇಡಿಕೆಯನ್ನು ನ್ಯಾಯಾಲಯದ ಮುಂದೆ ಇರಿಸಿದ್ದಾನೆ.
"ಜೈಲ್ ಕೋರ್ಟ್‌ಯಾರ್ಡ್ ಎಲ್ಲ ಬದಿಗಳಿಂದಲೂ ಸುರಕ್ಷಿತವಾಗಿದೆ. ಹಾಗಾಗಿ ತಾನು ಅಡ್ಡಾಡಿದರೆ ಭದ್ರತೆಗೆ ಅಡ್ಡಿಯಾಗದು. ಜೈಲಿನೊಳಗೆ ಏಕಾಂಗಿಯಾಗಿರುವ ನನಗೆ ಸಾಯಂಕಾಲದ ಹೊತ್ತು ವಾಯುಸೇವನೆಗೆ ಅವಕಾಶ ನೀಡಬೇಕು. ನಾನು ಸೆಲ್ ಒಳಗಡೆಯೇ ಇರುವಂತಾದರೆ ಮಾನಸಿಕ ಸಮತೋಲನ ಕಳೆದುಕೊಳ್ಳುಬಹುದು" ಎಂಬುದಾಗಿ ಆತ ತನ್ನ ವಕೀಲ ಅಬ್ಬಾಸ್ ಕಾಜ್ಮಿ ಮೂಲಕ ಹೇಳಿದ್ದಾನೆ.
ಇದಲ್ಲದೆ, ತನಗೆ ಉರ್ದುಟೈಮ್ಸ್ ಪತ್ರಿಕೆ, ಫ್ಲೇವರ್ ಇರುವ ಟೂತ್‌ಪೇಸ್ಟ್, ಪರ್ಫ್ಯೂಮ್ ಅಥವಾ ಡಿಯೋಡ್ರೆಂಟ್‌ಗಳು ಬೇಕು ಎಂದೂ ನ್ಯಾಯಲಯದಲ್ಲಿ ಬೇಡಿಕೆ ಇರಿಸಿದ್ದಾನೆ. ತನ್ನ ಬಂಧನದ ಬಳಿಕ ವಶಪಡಿಸಿಕೊಳ್ಳಲಾಗಿರುವ ತನ್ನೆಲ್ಲಾ ವೈಯಕ್ತಿಕ ವಸ್ತುಗಳು ಹಾಗೂ ದುಡ್ಡನ್ನು ಮರಳಿಸಬೇಕು ಎಂದೂ ಆತ ಕೇಳಿದ್ದಾನೆ.
ಕಸಬ್ ವಿಚಾರಣೆಗಾಗಿ ಅರ್ಥರ್ ರಸ್ತೆ ಜೈಲಿನಲ್ಲಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವೇಳೆ, ಕಸಬ್ ಪರ ವಕೀಲ ಅಬ್ಬಾಸ್ ಅವರು, ಕಸಬ್‌ನ ವಯಸ್ಸು ನಿರ್ಧಾರಕ್ಕಾಗಿ ತಮ್ಮ ಅಭಿಪ್ರಾಯ ನೀಡಿರುವ ಇಬ್ಬರು ವೈದ್ಯರಿಗೆ ಸಮನ್ಸ್ ನೀಡಬೇಕು ಎಂದು ಹೇಳಿದರು. ಈ ಇಬ್ಬರು ವೈದ್ಯರು ಕಸಬ್‌ನ ಹಲ್ಲು ಮತ್ತು ದಂತ ಪರೀಕ್ಷೆಯ ಆಧಾರದಿಂದ ಆತನ ವಯಸ್ಸು 20ರಿಂದ 25 ವರ್ಷಗಳು ಎಂಬ ವರದಿ ನೀಡಿದ್ದಾರೆ.
ವೈದ್ಯರಾದ ಜೆಜೆ ಆಸ್ಪತ್ರೆಯ ಎಸ್. ನಂದಕುಮಾರ್ ಹಾಗೂ ನಾಯರ್ ಆಸ್ಪತ್ರೆಯ ಯೋಗಿತಾ ದೇವ್ಕಾರ್ ಅವರು ಈ ಪರೀಕ್ಷೆ ನಡೆಸಿ ವರದಿ ಸಲ್ಲಿಸಿದ್ದಾರೆ. ವೈದ್ಯಕೀಯ ವರದಿಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯವು ತನ್ನ ತೀರ್ಪನ್ನು ಮೇ2 ರಂದು ನೀಡಲಿದೆ. |