ಎಲ್ಟಿಟಿಇಯ ಅವಸಾನ ಸಮೀಪಿಸುತ್ತಿರುವಂತೆಯೇ, ಉಗ್ರರು ಶ್ರೀಲಂಕಾದಿಂದ ಪರಾರಿಯಾಗಿ ಭಾರತದೊಳಕ್ಕೆ ಸೇರಿಕೊಳ್ಳಬಹುದು ಎಂಬುದಾಗಿ ಗುಪ್ತಚರ ಮಾಹಿತಿಗಳು ಹೇಳುತ್ತಿವೆ.ಎಲ್ಟಿಟಿಇಯ ಹೋರಾಟ ಸಾಮರ್ಥ್ಯ ಬಹುತೇಕ ಉಡುಗಿದೆಯಾದರೂ, ಅದರ ನಿಧಿ ಸಂಗ್ರಹ ಹಾಗೂ ಅಂತಾರಾಷ್ಟ್ರೀಯ ಕಾರ್ಯಾಚರಣೆಗಳು ಇನ್ನೂ ಚಾಲ್ತಿಯಲ್ಲಿದೆ.
ಈ ಉಗ್ರವಾದಿ ಸಂಘಟನೆಯು ಗೆರಿಲ್ಲಾ ಯುದ್ಧ ನಡೆಸುವ ಸಾಮರ್ಥ್ಯವನ್ನು ಇನ್ನೂ ಹೊಂದಿದೆ ಎಂದು ಗುಪ್ತಚರ ಮಾಹಿತಿಗಳು ಹೇಳುತ್ತವೆ. ಈ ನಿಷೇಧಿತ ಸಂಘಟನೆಯು ಅಪಾಯಕಾರಿಯಾಗಿ ಮುಂದುವರಿಯಲಿದ್ದು, ಉಗ್ರವಾದಿ ದಾಳಿಗಳನ್ನು ನಡೆಸಲು ಶಕ್ತವಾಗಿದೆ ಎಂದು ವರದಿಗಳು ತಿಳಿಸಿವೆ.
ಭಾರತವು ಶ್ರೀಲಂಕಾದಿಂದ ಬರುತ್ತಿರುವ ನಿರಾಶ್ರಿತರೊಂದಿಗೆ ಉಗ್ರರು ಸೇರಿಲ್ಲ ಎಂಬುದನ್ನು ದೃಢಪಡಿಸಿಕೊಳ್ಳಲು ತೀವ್ರ ತಪಾಸಣೆ ನಡೆಸುತ್ತಿದೆ. ನೌಕಾ ಪಡೆ, ಕೋಸ್ಟ್ ಗಾರ್ಡ್ ಮತ್ತು ಸದರ್ನ್ ಕಮಾಂಡ್ ಪಡೆಗಳು ಕಟ್ಟೆಚ್ಚರ ವಹಿಸಿದ್ದು, ಎಲ್ಟಿಟಿಇ ಅಂಶಗಳು ಭಾರತೀಯ ಪ್ರಾಂತ್ಯದೊಳಕ್ಕೆ ನುಸುಳದಂತೆ ಎಚ್ಚರ ವಹಿಸಲಾಗಿದೆ ಎಂದು ಸೇನಾ ಉಪಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ನೋಬೆಲ್ ತಂಬುರಾದ್ ಹೇಳಿದ್ದಾರೆ.
ಎಲ್ಟಿಟಿಇಗಳು ರಾಜ್ಯಕ್ಕೆ ನುಸುಳುವ ಸಾಧ್ಯತೆ ಇದೆ ಎಂಬ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ತಮಿಳರು ಹೆಚ್ಚಿರುವ ಪ್ರದೇಶಗಳ ಮೇಲೆ ಎಚ್ಚರ ವಹಿಸಲಾಗಿದೆ. |