ಬೋಪೋರ್ಸ್ ಪ್ರಕರಣವನ್ನು ಯಶಸ್ವಿಯಾಗಿ ನಿಭಾಯಿಸಲು ಬಿಜೆಪಿ ನೇತೃತ್ವದ ಎನ್‌ಡಿಎ ಸೇರಿದಂತೆ ಕಾಂಗ್ರೆಸ್ಸೇತರ ಪಕ್ಷಗಳು ಸೂಕ್ತವಾದ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್ ದೂರಿದೆ. ಬೋಫೋರ್ಸ್ ಪ್ರಕರಣದ ಆರೋಪಿಯಾಗಿದ್ದ ಇಟಲಿ ಉದ್ಯಮಿ ಒಟ್ಟಾವಿಯೋ ಕ್ವಟ್ರೋಚಿ ಅವರ ವಿರುದ್ಧ ಹೊರಡಿಸಲಾಗಿದ್ದ ರೆಡ್ ಕಾರ್ನರ್ ನೋಟೀಸನ್ನು ಸಿಬಿಐ ಇತ್ತೀಚೆಗೆ ಹಿಂತೆಗೆದುಕೊಂಡಿದೆ.
"ಕಳೆದ 22 ವರ್ಷಗಳಲ್ಲಿ, 10 ವರ್ಷಗಳ ಕಾಲ ಕಾಂಗ್ರೇಸ್ಸೇತರ ಸರ್ಕಾರ ಆಳ್ವಿಕೆ ನಡೆಸಿದ್ದು, ಅವುಗಳು ಕ್ವಟ್ರೋಚಿಯನ್ನು ಹಿಡಿದು ಹತ್ತಿರದ ಮರಕ್ಕೆ ನೇತು ಹಾಕುವಲ್ಲಿ ಯಾಕೆ ವಿಫಲವಾಗಿವೆ" ಎಂಬುದಾಗಿ ಕಾಂಗ್ರೆಸ್ ಪಕ್ಷದ ವಕ್ತಾರ ಅಭಿಶೇಕ್ ಸಿಂಘ್ವಿ ಪ್ರಶ್ನಿಸಿದ್ದಾರೆ. ಅವರು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಬೋಫೋರ್ಸ್ ಹಗರಣಕ್ಕೆ ಸಂಬಂಧಿಸಿದಂತೆ 2004ರಲ್ಲಿ ಆಗಿನ ಎನ್‌ಡಿಎ ಸರ್ಕಾರ ಹೈಕೋರ್ಟ್ ಆದೇಶವನ್ನು ವಜಾ ಮಾಡುವಂತೆ ಯಾಕೆ ಸುಪ್ರೀಂಕೋರ್ಟಿನಲ್ಲಿ ಯಾಕೆ ಮೇಲ್ಮನವಿ ಸಲ್ಲಿಸಿಲ್ಲ ಎಂದು ಪ್ರಶ್ನಿಸಿದರು. ಸಿಂಘ್ವಿ ಅವರು ಹಿರಿಯ ವಕೀಲರೂ ಆಗಿದ್ದಾರೆ.
ಬೋಫೋರ್ಸ್ ಪ್ರಕರಣದಿಂದಲೇ ತಮ್ಮ ಭವಿಷ್ಯವನ್ನು ನಿರ್ಧರಿಸಿಕೊಂಡವರೂ ಇದ್ದಾರೆ ಎಂದೂ ಅವರು ವ್ಯಂಗ್ಯವಾಡಿದರು. ಪ್ರಕರಣವನ್ನು ವಜಾ ಮಾಡಿರುವ ದೆಹಲಿ ಹೈ ಕೋರ್ಟ್ ಆದೇಶವನ್ನು ಯಾಕೆ ಎನ್‌ಡಿಎ ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲೇ ಇಲ್ಲ ಎಂಬುದು ತಿಳಿಯಿತು ಎಂದು ಅವರು ಹೇಳಿದರು.
ಫೆಡರಲ್ ಕೋರ್ಟ್ ಸೇರಿದಂತೆ ಮಲೇಶ್ಯಾದ ನಾಲ್ಕು ಕೋರ್ಟ್‌ಗಳು ಕ್ವಟ್ರೋಚಿ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಪಡೆಯಲಿಲ್ಲ. ಅಂತೆಯೇ ಅರ್ಜೆಂಟೈನಾದ ಎರಡು ನ್ಯಾಯಾಲಯಗಳಿಗೂ ಯಾವುದೇ ಸಾಕ್ಷ್ಯಾಧಾರ ಸಲ್ಲಿಸಿಲ್ಲ ಎಂದವರು ಹೇಳಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಪ್ರವಾಸಕ್ಕಾಗಿ ಮತ್ತು ಕಾನೂನು ವೆಚ್ಚಗಳಿಗಾಗಿ ಮಾತ್ರವೇ 200 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಆದರೆ ಆಪಾದಿತ ಲಂಚದ ಮೊತ್ತ 64 ಕೋಟಿ ರೂಪಾಯಿ ಎಂದವರು ವಿವರಿಸಿದರು. |