ಚೆನ್ನೈಯ ವ್ಯಾಸರಪಾಡಿ ರೈಲ್ವೇ ನಿಲ್ದಾಣದಲ್ಲಿ ಮಂಗಳವಾರ ಸಂಭವಿಸಿರುವ ನಿಗೂಢ ರೈಲು ಅಪಘಾತವು ಭದ್ರತಾ ಲೋಪವನ್ನು ಎತ್ತಿತೋರಿಸುತ್ತಿದ್ದು, ರೈಲ್ವೇಯ ನಿರ್ಲಕ್ಷ್ಯದ ಕುರಿತು ಪ್ರಶ್ನೆಗಳು ಉದ್ಭವಿಸುವಂತೆ ಮಾಡಿದೆ. ಮಂಗಳವಾರದ ಈ ಅಚ್ಚರಿಯ ಅಪಘಾತದಲ್ಲಿ ನಾಲ್ಕುಮಂದಿ ಸಾವನ್ನಪ್ಪಿದ್ದು ಇತರ 11 ಮಂದಿ ಗಾಯಗೊಂಡಿದ್ದರು. ಮದ್ರಾಸ್ ಮೂರ್ ಮಾರ್ಕೆಟ್ ನಿಲ್ದಾಣದ 14ನೆ ಫ್ಲಾಟ್‌ಫಾರಂನಿಂದ ಮುಂಜಾನೆ 4.55ರ ವೇಳೆಗೆ ಅಂದರೆ ರೈಲು ಹೊರಡಲು ನಿಗದಿತ ಸಮಯದ 20 ನಿಮಿಷ ಮುಂಚಿತವಾಗಿ ಹೊರಟು ತಪ್ಪು ದಾರಿಯಲ್ಲಿ ಸಾಗಿದ್ದ ಈ ರೈಲು ಗಂಟೆಗೆ 96 ಕಿಲೋಮೀಟರ್ ವೇಗದಲ್ಲಿ ಸಾಗಿ ವ್ಯಾಸರಪಾಡಿ ಜೀವ ರೈಲು ನಿಲ್ದಾಣದಲ್ಲಿ ಎದುರಿನಿಂದ ಬರುತ್ತಿದ್ದ ಗೂಡ್ಸ್ ರೈಲಿಗೆ ಡಿಕ್ಕಿಯಾಗಿತ್ತು. ಅಸಹಜ ಎಂಬಂತೆ ಎದುರಿನಿಂದ ಬರುತ್ತಿದ್ದ ರೈಲನ್ನು ಕಂಡ ಗೂಡ್ಸ್ ರೈಲು ಚಾಲಕ ಮತ್ತು ಗಾರ್ಡ್ ರೈಲಿನಿಂದ ಹಾರಿ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಗೂಡ್ಸ್ ರೈಲು ಸ್ವಲ್ಪದರಲ್ಲೇ ಕವಲು ದಾರಿಯಲ್ಲಿ ಸಾಗಲಿತ್ತು. ಒಂದೊಮ್ಮೆ ಈ ರೈಲು ದಾಟಿ ಬಿಟ್ಟಿರುತ್ತಿದ್ದರೆ ಭಾರೀ ಅನಾಹುತವೇ ಸಂಭವಿಸುತ್ತಿತ್ತು. ಗೂಡ್ಸ್ ರೈಲಿಗಿಂತ ಹಿಂದೆ ನೂರಾರು ಜನರಿಂದ ತುಂಬಿತುಳುಕುತ್ತಿದ್ದ ಮಂಗ್ಳೂರು ಮೈಲ್ ರೈಲು ಚೆನ್ನೈ ಸೆಂಟ್ರಲ್‌ನತ್ತ ಸಾಗುತ್ತಿತ್ತು. ಈ ರೈಲೇನಾದರು ಎದರು ಸಿಕ್ಕಿದ್ದರೆ?ರೈಲು ಅಪಘಾತಕ್ಕೆ ಅನಧಿಕೃತ ವ್ಯಕ್ತಿ ರೈಲು ಚಲಾಯಿಸಿದ್ದೇ ಕಾರಣ ಎಂಬುದಾಗಿ ರೈಲ್ವೇ ಅಧಿಕಾರಿಗಳು ಹೇಳುತ್ತಿದ್ದಾರೆ. ಇಷ್ಟೊಂದು ದೊಡ್ಡ ಅನಾಹುತ ನಡೆದಿದ್ದರೂ, ನಿರೀಕ್ಷಿತ ಮಟ್ಟದಲ್ಲಿ ರಾಜಕಾರಣಿಗಳ ಕಳಕಳಿ ವ್ಯಕ್ತವಾಗದಿರುವುದೂ ಸಹ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ರೈಲ್ವೇ ಇಲಾಖೆ ರಾಜ್ಯಸಚಿವ ವೇಲು ಅವರು ತಮಿಳ್ನಾಡಿನವರಾಗಿದ್ದರೂ ಇದ್ಯಾಕೆ ಹೀಗೆ ಎಂದು ಜನಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ. ಚುನಾವಣಾ ಪ್ರಭಾವ ಇರಬಹುದೂ ಎಂಬುದು ಇನ್ನೊಂದು ಕೋನದ ವಿಶ್ಲೇಷಣೆ.ಅಪಘಾತಕ್ಕೀಡದ ರೈಲು 5.15ಕ್ಕೆ ಹೊರಡಬೇಕಿತ್ತು. ಆದರೆ ಕರ್ತವ್ಯನಿರತ ಚಾಲಕನ ಬದಲಿಗೆ ಇನ್ಯಾರೋ ಅನಧಿಕೃತ ವ್ಯಕ್ತಿ ರೈಲನ್ನು 4.55ರ ವೇಳೆಗೆ ರೈಲನ್ನು ಚಲಾಯಿಸಿದ್ದ. ಆ ವೇಳೆಗೆ ಕೆಲವೇ ಕೆಲವು ಪ್ರಯಾಣಿಕರು ರೈಲನ್ನೇರಿದ್ದರು. ಅತ್ಯಂತ ವೇಗವಾಗಿ ಸಾಗಿದ್ದ ಈ ರೈಲು ಎರಡೇ ನಿಮಿಷದಲ್ಲಿ ಅಂದರೆ 4.57ಕ್ಕೆ ಮೂರುವರೆ ಕಿಲೋಮೀಟರ್ ಕ್ರಮಿಸಿ ವ್ಯಾಸರಪಾಡಿ ರೈಲ್ವೇ ನಿಲ್ದಾಣ ತಲುಪಿದೆ. ಈ ರೈಲು 4.56ಕ್ಕೆ ಬೇಸಿನ್ ಬ್ರಿಜ್ ರೈಲ್ವೇ ನಿಲ್ದಾಣ ಹಾದು ಹೋಗಿದ್ದು, ಅಲ್ಲಿನ ರೈಲ್ವೇ ಸಿಬ್ಬಂದಿಗಳು ಭಯಭೀತರಾಗಿದ್ದರು. ವ್ಯಾಸರಪಾಡಿಗೆ ತಲುಪುವ ಮುನ್ನ ಎರಡು ನಿಲ್ದಾಣದಲ್ಲಿ ರೈಲು ನಿಲ್ಲದೆ ಸಾಗಿತ್ತು. 4.57ಕ್ಕೆ ಗೂಡ್ಸ್ ರೈಲಿಗೆ ಡಿಕ್ಕಿಯಾಗಿದ್ದು, ತಕ್ಷಣವೇ ಬೋಗಿಗಳಿಗೆ ಬೆಂಕಿ ಹತ್ತಿಕೊಂಡಿತ್ತು. ಮೃತರು ಎದುರಿನ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು.ರೈಲಿನ ಹೊಣೆ ವಹಿಸುವ ಮತ್ತು ಪಡೆಯುವ ಶಿಷ್ಟಾಚಾರವನ್ನು ರೈಲ್ವೈ ಸಿಬ್ಬಂದಿ ವಹಿಸಿಲ್ಲ ಎಂಬ ಸೂಚನೆಗಳು ಲಭಿಸಿವೆ. "ರೈಲನ್ನು ಅನಧಿಕೃತ ವ್ಯಕ್ತಿ ಚಲಾಯಿಸಿದ್ದಾನೆ. ಆತನಿಗೆ ರೈಲ್ವೇ ಇಂಜಿನ್ ಕುರಿತು ತಾಂತ್ರಿಕ ಜ್ಞಾನ ಇದ್ದಂತೆ ತೋರುತ್ತಿದೆ. ಇಲ್ಲವಾದರೆ ಆತ ಅಷ್ಟು ವೇಗವಾಗಿ ಚಲಾಯಿಸಲು ಸಾಧ್ಯವಿಲ್ಲ" ಎಂಬುದಾಗಿ ದಕ್ಷಿಣ ರೈಲ್ವೇಯ ಮಹಾ ಪ್ರಬಂಧಕ ಎಂ.ಎಸ್.ಜಯಂತ್ ಹೇಳಿದ್ದಾರೆ. ಆದರೆ ಈ ಅನಧಿಕೃತ ವ್ಯಕ್ತಿ ಯಾರು ಎಂಬ ಕುರಿತು ಇದುವರೆಗೆ ಯಾವುದೇ ಸುಳಿವು ಲಭ್ಯವಾಗಿಲ್ಲ. 12 ಬೋಗಿಗಳಿರುವ ಒಂದು ರೈಲನ್ನೇ ಅನಧಿಕೃತ ವ್ಯಕ್ತಿಗಳು ಚಲಾಯಿಸಬಹುದು ಎಂಬಾದರೆ ಈ ಕುರಿತು ಯಾವುದೇ ಭದ್ರತಾ ಕ್ರಮಗಳನ್ನು ರೈಲ್ವೇಯು ವಹಿಸುತ್ತಿಲ್ಲವೇ ಎಂಬ ಪ್ರಶ್ನೆಯನ್ನೂ ಸಹ ಈ ಘಟನೆ ಹುಟ್ಟುಹಾಕಿದೆ.ಮೃತರಲ್ಲಿ ಮೂವರನ್ನು ಮನೋಹರ್ ರಾಜ್(40), ಜೋಸೆಫ್ ಅಂತೋನಿರಾಜ್(40) ಹಾಗೂ ಆರೋಗ್ಯನಾಥನ್(35) ಎಂದು ಗುರುತಿಸಲಾಗಿದೆ. ಇನ್ನೋರ್ವನ ಗುರುತು ಪತ್ತೆಯಾಗಿಲ್ಲ. ಆತ ಫ್ಲಾಟ್‌ಫಾರಂನಲ್ಲಿದ್ದ ಎಂದು ಹೇಳಲಾಗಿದೆ.ಸಿಬಿ-ಸಿಐಜಿ ತನಿಖೆಗೆ ಆದೇಶ ಈ ಅಪಘಾತದ ಕುರಿತು ತನಿಖೆಗೆ ಆದೇಶ ನೀಡಲಾಗಿದೆ. ತಮಿಳ್ನಾಡ್ ಪೊಲೀಸ್‌ನ ಸಿಬಿ-ಸಿಐಡಿ ದಳಕ್ಕೆ ತನಿಖೆಯ ಜವಾಬ್ದಾರಿ ವಹಿಸಲಾಗಿದೆ. ಈ ಅಪಘಾತದ ಹಿಂದೆ ಯಾವುದಾದರೂ ವಿಧ್ವಂಸಕ ಕೃತ್ಯದ ಹುನ್ನಾರವೇನಾದರೂ ಇತ್ತೆ ಎಂಬುದು ಸೇರಿದಂತೆ ಎಲ್ಲಾ ಕೋನಗಳಿಂದರೂ ತಂಡವು ತನಿಖೆ ನಡೆಸಲಿದೆ.ಈ ಕುರಿತು ಯಾವುದೇ ಅಭಿಪ್ರಾಯದ ಕುರಿತು ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂಬುದಾಗಿ ಸಿಬಿ-ಸಿಐಡಿ ಎಡಿಜಿಪಿ ಅರ್ಚನ ರಾಮಸುಂದರಂ ಗುರುವಾರ ಹೇಳಿದ್ದಾರೆ.ಈ ಮಧ್ಯೆ, ಉಗ್ರವಾದಿ ಸಂಘಟನೆಗಳ ಕುರಿತು ತನಿಖೆ ನಡೆಸುವ ಕ್ಯೂ ಬ್ರಾಂಚ್ ಎಲ್ಲಾ ಸಾಧ್ಯತೆಗಳ ಕುರಿತು ತನಿಖೆ ನಡೆಸಲಾಗುವುದು ಎಂದು ಹೇಳಿದೆ. ಅಲ್ಲದೆ ಇದುವರೆಗೆ ಅಪಘಾತದ ಕುರಿತು ಯಾವುದೇ ಸಂಘಟನೆಯು ಹೊಣೆ ಹೊತ್ತುಕೊಂಡಿಲ್ಲ ಎಂದೂ ಅದು ತಿಳಿಸಿದೆ. |