ಗೋಧ್ರಾ ನಂತರ ಗಲಭೆಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯವು ಆದೇಶಿಸಿರುವ ತನಿಖೆಗೆ ಸಂಬಂಧಿಸಿದಂತೆ ನರೇಂದ್ರ ಮೋದಿ ಟೀಕಿಸಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ನ್ಯಾಯಾಲಯ ನಿಂದನೆ ಪ್ರಕರಣ ಹೂಡಲಾಗಿದ್ದು, ಈ ಪ್ರಕರಣವನ್ನು ಮುಂದಿನ ವಾರ ವಿಚಾರಿಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ.
ಪ್ರಶಾಂತ್ ಭೂಷಣ್ ಎಂಬ ವಕೀಲರು ಈ ಅರ್ಜಿಯನ್ನ ಸಲ್ಲಿಸಿದ್ದು, ಮುಖ್ಯನ್ಯಾಯಾಧೀಶ ಕೆ.ಜಿ ಬಾಲಕೃಷ್ಣನ್ ನೇತೃತ್ವದ ನ್ಯಾಯಪೀಠದ ಮುಂದೆ ಪ್ರಸ್ತಾಪಿಸಲಾಗಿದೆ.
ಭೂಷಣ್ ಅವರು ಮಾಜಿ ಕಾಂಗ್ರೆಸ್ ಸಂಸದ ದಿವಂಗತ ಇಶಾನ್ ಜಾಫ್ರಿ ಪತ್ನಿ ಜಕಿಯ ನಸೀಮ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಿಕಸ್ ಕ್ಯೂರಿಯಾಗಿ ನೇಮಕಗೊಂಡಿದ್ದು, ನ್ಯಾಯಾಲಯಕ್ಕೆ ಸಹಕರಿಸುತ್ತಿದ್ದಾರೆ. 2002ರ ಗಲಭೆಯ ವೇಳೆಗೆ ಸಾವನ್ನಪ್ಪಿರುವ ಜಾಫ್ರಿ ಕುರಿತಾಗಿ ತಾನು ಸಲ್ಲಿಸಿರುವ ದೂರನ್ನು ಗುಜರಾತ್ ಸರ್ಕಾರ ಪರಿಗಣಿಸುತ್ತಿಲ್ಲ ಎಂದು ಜಕಿಯ ಅವರು ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾರೆ.
ಸುಪ್ರೀಂಕೋರ್ಟ್ ತನ್ನ ವಿರುದ್ಧ ತನಿಖೆಗೆ ಆದೇಶಿಸಿರುವುದು ಕಾಂಗ್ರೆಸ್ ನಡೆಸಿರುವ ಫಿತೂರಿಯ ಫಲಿತಾಂಶ ಎಂಬುದಾಗಿ ಮೋದಿ ಆಪಾದಿಸಿರುವುದಾಗಿ ನ್ಯಾಯಾಲಯ ನಿಂದನೆ ದೂರಿನಲ್ಲಿ ಹೇಳಲಾಗಿದೆ.
ಅಲ್ಲದೆ, ಈ ಎಲ್ಲಾ ಪ್ರಯತ್ನಗಳು ಮೋದಿ ಅವರನ್ನು ಜೈಲಿಗೆ ತಳ್ಳಲು ಮಾಡುತ್ತಿರುವ ಪ್ರಯತ್ನ ಎಂಬುದಾಗಿ ಹೇಳುತ್ತಿರುವ ಜಾಹೀರಾತನ್ನೂ ವಕೀಲರು ಅರ್ಜಿಯಲ್ಲಿ ಪ್ರಸ್ತಾಪಿಸಿದ್ದಾರೆ.
ಇದೇ ಜಾಹಿರಾತಿನಲ್ಲಿ ಬೋಫೋರ್ಸ್ ಪ್ರಕರಣದ ಆರೋಪಿ ಒಟ್ಟಾವಿಯೋ ಕ್ವಟ್ರೋಚಿ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ ಎಂದು ಬೆಟ್ಟು ಮಾಡಲಾಗಿದೆ. |