ಹಂದಿಜ್ವರ ಸೋಂಕು ತಗುಲಿರುವ ಶಂಕೆಯಿಂದ, ವಿದೇಶದಿಂದ ವಿಮಾನದಲ್ಲಿ ಬಂದಿಳಿದಿರುವ ಮೂವರು ವ್ಯಕ್ತಿಗಳನ್ನು ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಿದ್ದು ಅವರ ಮೇಲೆ ತೀವ್ರ ನಿಗಾ ಇರಿಸಲಾಗಿದೆ.
ಚಿಕಾಗೋದಿಂದ ಬಂದಿರುವ ಇಬ್ಬರು ಮತ್ತು ಲಂಡನ್‌ನಿಂದ ಬಂದಿರುವ ಒರ್ವ ಸೇರಿದಂತೆ ಒಟ್ಟು ಮೂರು ಮಂದಿಗೆ ಎಚ್1ಎನ್1 ಸೋಂಕು ತಗುಲಿರುವ ಲಕ್ಷಣಗಳು ಕಂಡು ಬಂದಿದ್ದು, ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಮೂವರೂ ಕೆಮ್ಮು, ಶೀತ ಜ್ವರ ಹಾಗೂ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದಾರೆ. ವಿದೇಶಗಳಿಂದ, ಅದರಲ್ಲೂ, ಹಂದಿಜ್ವರದ ಸೋಂಕು ತಗುಲಿರುವ ರಾಷ್ಟ್ರಗಳಿಂದ ಆಗಮಿಸುತ್ತಿರುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇರಿಸಿದ್ದು, ಎಲ್ಲಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ತಪಾಸಣೆಗೊಳಪಡಿಸಲಾಗುತ್ತಿದೆ.
ಪರಮ್‌ಜಿತ್ ಕೌರ್ ಮತ್ತು ಜಗಜೀವನ್ ಸಿಂಗ್ ಎಂಬಿಬ್ಬರು ಅಮೆರಿಕನ್ ಏರ್‌ಲೈನ್ಸ್‌ನಲ್ಲಿ ಬಂದಿಳಿದಿದ್ದು, ಅವರನ್ನು ಶುಕ್ರವಾರ ರಾತ್ರಿ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರನ್ನು ಆಸ್ಪತ್ರೆಯಲ್ಲಿ ಇತರರ ಸಂಪರ್ಕಕ್ಕೆ ಬರದಂತೆ ಪ್ರತ್ಯೇಕವಾಗಿ ಇರಿಸಲಾಗಿದೆ. ಇದೇ ವೇಳೇ ಲಂಡನ್‌ನಿಂದ ಬ್ರಿಟಿಷ್ ಏರ್‌ವೇಸ್‌ನಲ್ಲಿ ಆಗಮಿಸಿರುವ ಅಶ್ವಿನಿ ಎಂಬವರನ್ನು ಶನಿವಾರ ಮುಂಜಾನೆ ಅದೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪರಮ್‌ಜಿತ್ ಅವರು ಕಳೆದೈದು ದಿನದಿಂದ ಜ್ವರದಿಂದ ಬಳಸುತ್ತಿದ್ದರೆ, ಜಗಜೀವನ್ ಅವರು ಕಳೆದ 12 ದಿನಗಳಿಂದ ಜ್ವರ ಹಾಗೂ ಗಂಟಲಿನ ಸೋಂಕಿನಿಂದ ಬಳಲುತ್ತಿದ್ದರು. ಈ ಇಬ್ಬರೂ ಹಂದಿಜ್ವರ ಸೋಂಕು ವ್ಯಾಪಿಸಿರುವ ಅಮೆರಿಕದ ಟೆಕ್ಸಾಸ್ ಮತ್ತು ಚಿಕಾಗೋ ರಾಜ್ಯಗಳಿಗೆ ಭೇಟಿ ನೀಡಿದ್ದರು ಎಂದು ತಪಾಸಣೆ ವೇಳೆಗೆ ತಿಳಿಸಿದ್ದಾರೆ. |