ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರು ಬಾಬ್ರಿ ಮಸೀದಿ ಧ್ವಂಸಕ್ಕೆ ಕಾರಣ ಎಂದಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು, ಆರ್‌ಜೆಡಿಗೂ, ಕಲ್ಯಾಣ್ ಸಿಂಗ್‌ಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.
"ಕಲ್ಯಾಣ್ ಸಿಂಗ್ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ದೋಷಿ. ಅವರು ಸಮಾಜವಾದಿ ಪಕ್ಷದ ಸದಸ್ಯರಲ್ಲ" ಎಂಬುದಾಗಿ ಲಾಲೂ, ಕಲ್ಯಾಣ್ ಬಗ್ಗೆ ಹೇಳಿದ್ದಾರೆ. ಕಲ್ಯಾಣ್ ಸಿಂಗ್ ಇತ್ತೀಚೆಗೆ ಸಮಾಜವಾದಿ ಪಕ್ಷದೊಂದಿಗೆ ಕೈ ಜೋಡಿಸಿದ್ದಾರಾದರೂ, ಉತ್ತರಪ್ರದೇಶದ ಇಟಾದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಫರ್ಧಿಸುತ್ತಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಲಾಲೂ ಪ್ರಸಾದ್ ಯಾದವ್, ಕೇಂದ್ರದಲ್ಲಿ ಯುಪಿಎ ಅಧಿಕಾರ ಹಿಡಿಯುವುದು ನಿಶ್ಚಿತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಾವು ಹೆಚ್ಚಿನ ಸಂಖ್ಯೆಯ ಸ್ಥಾನಗಳನ್ನು ಗೆಲ್ಲುತ್ತೇವೆ ಮತ್ತು ಯುಪಿಎ ಸರ್ಕಾರ ರಚಿಸಲಿದೆ ಮತ್ತು ಎಡಪಕ್ಷಗಳು ಕೋಮುವಾದಿಗಳನ್ನು ಬೆಂಬಲಿಸಲಾರರು ಎಂಬುದಾಗಿ ಅವರು ನುಡಿದರು.
ಬಿಹಾರದ ಮಾಜಿ ಮುಖ್ಯಮಂತ್ರಿಯಾಗಿರುವ ಲಾಲೂ, ಸರಣ್ ಮತ್ತು ಪಾಟಲಿಪುತ್ರದ ಎರಡು ಕ್ಷೇತ್ರಗಳಿಂದ ಸ್ಫರ್ಧಿಸುತ್ತಿದ್ದಾರೆ. ಸರಣ್ ಕ್ಷೇತ್ರದಲ್ಲಿ ಎಪ್ರಿಲ್ 16ರಂದು ಚುನಾವಣೆ ನಡೆದಿದ್ದರೆ, ಪಾಟಲಿಪುತ್ರದಲ್ಲಿ ಕೊನೆಯಹಂತದ ಮೇ7ರಂದು ಚುನಾವಣೆ ನಡೆಯಲಿದೆ.
ಸರಣ್‌ನಲ್ಲಿ ಲಾಲೂ ಎದುರು ಭಾರತೀಯ ಜನತಾಪಕ್ಷದ ನಾಯಕ ರಾಜೀವ್ ಪ್ರತಾಪ್ ರೂಢಿ ಸ್ಫರ್ಧಿಸುತ್ತಿದ್ದರೆ, ಪಾಟಲಿಪುತ್ರದಲ್ಲಿ ಜೆಡಿಯುವಿನ ರಂಜನ್ ಯಾದನ್ ಅವರು ಲಾಲೂವಿನ ಪ್ರಮುಖ ಪ್ರತಿಸ್ಫರ್ಧಿಯಾಗಿದ್ದಾರೆ. |