ಸ್ವಿಸ್ ಬ್ಯಾಂಕುಗಳಲ್ಲಿ ಕೊಳೆಯುತ್ತಿರುವ ಹಣವನ್ನು ಭಾರತಕ್ಕೆ ಮರಳಿ ತರುವ ಕುರಿತು ಎಲ್ಲೆಡೆಯ ಒತ್ತಡ ಎದುರಿಸುತ್ತಿರುವ ಕೇಂದ್ರ ಸರ್ಕಾರವು ಈ ಕುರಿತು ಶನಿವಾರ ಸುಪ್ರೀಂಕೋರ್ಟಿನಲ್ಲಿ ಅಫಿದಾವಿತ್ ಸಲ್ಲಿಸಿದೆ.
ಸಿರಿವಂತ ಭಾರತೀಯರು ವಿದೇಶಿಬ್ಯಾಂಕುಗಳಲ್ಲಿ ಇರಿಸಿರುವ ಸುಮಾರು 70 ಟ್ರಿಲಿಯನ್ ರೂಪಾಯಿಗಳಿಗಿಂತ ಅಧಿಕ ಹಣವನ್ನು ಮರಳಿ ಭಾರತಕ್ಕೆ ತರಲು ಸಾಧ್ಯ ಇರುವ ಎಲ್ಲವನ್ನೂ ಮಾಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತನ್ನ ಅಫಿದಾವಿತ್‌ನಲ್ಲಿ ಹೇಳಿದೆ.
ಸ್ವಿಸ್ ಬ್ಯಾಂಕ್ ಸೇರಿದಂತೆ ತೆರಿಗೆ ಸ್ವರ್ಗಗಳಲ್ಲಿ ಕೊಳೆಯುತ್ತಿರುವ ಕಪ್ಪುಹಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ರಾಮ್ ಜೇಠ್ಮಲಾನಿ, ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಸುಭಾಶ್ ಸಿ ಕಶ್ಯಪ್ ಮತ್ತು ಪಂಜಾಬಿನ ಮಾಜಿ ಪೊಲೀಸ್ ವರಿಷ್ಠ ಕೆಪಿಎಸ್ ಗಿಲ್ ಅವರುಗಳು ಸಲ್ಲಿಸಿರುವ ಅರ್ಜಿಗೆ ಉತ್ತರವಾಗಿ ಕೇಂದ್ರ ಈ ಪ್ರಮಾಣಪತ್ರವನ್ನು ಸಲ್ಲಿಸಿದೆ. ಇವರು ತಮ್ಮ ಅರ್ಜಿಯಲ್ಲಿ ವಿದೇಶಗಳಲ್ಲಿ ಬಂಧಿಯಾಗಿರುವ ಹಣವನ್ನು ಭಾರತಕ್ಕೆ ತರುವಂತೆ ನಿರ್ದೇಶನ ನೀಡಲು ನ್ಯಾಯಾಲಯವನ್ನು ಕೋರಿದ್ದರು.
ಸುಪ್ರೀಂಕೋರ್ಟಿಗೆ ಸಲ್ಲಿಸಲಾಗಿರುವ ಅರ್ಜಿಯನ್ನು ರಾಜಕೀಯ ಪ್ರೇರಿತವಾದುದು ಎಂದು ತನ್ನ ಅಫಿದಾವಿತ್‌ನಲ್ಲಿ ದೂರಿರುವ ಸರ್ಕಾರವು, ಚುನಾವಣೆ ವೇಳೆ ಅರ್ಜಿಸಲ್ಲಿಸಿರುವ ಕ್ರಮವನ್ನು ಪ್ರಶ್ನಿಸಿದ್ದು, ಅರ್ಜಿಯನ್ನು ವಜಾಗೊಳಿಸಲು ಕೋರಿದೆ.
ಶಂಕಿತ ಪ್ರಕರಣಗಳ ಲೆಕ್ಕಾಚಾರವನ್ನು ಮರುಆರಂಭಿಸುವ ಕುರಿತೂ ಕೇಂದ್ರವು ತನ್ನಪ್ರಮಾಣಪತ್ರದಲ್ಲಿ ಹೇಳಿದೆ. ಇದಲ್ಲದೆ, ಆರ್ಥಿಕ ಸ್ಥಿತಿಗತಿಗಳ ಬಗ್ಗೆ ನಿಗಾವಹಿಸುತ್ತಿರುವುದಾಗಿಯೂ ಅದು ಹೇಳಿಕೊಂಡಿದೆ.
ರಹಸ್ಯ ಖಾತೆಗಳಿಗೆ ಹೆಸರಾಗಿರುವ ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರ ಅತ್ಯಧಿಕ ಠೇವಣಿಗಳಿವೆ. ಆ ಬ್ಯಾಂಕುಗಳಲ್ಲಿ ತಮ್ಮ ರಾಷ್ಟ್ರಗಳವರು ಇರಿಸಿರುವ ಮೊತ್ತದ ಕುರಿತು ವಿವರಣೆ ನೀಡುವಂತೆ ಅಮೆರಿಕ ಮತ್ತು ಇತರ ಪಾಶ್ಚಾತ್ಯ ರಾಷ್ಟ್ರಗಳು ಹೇರಿರುವ ಒತ್ತಾಯದ ಹಿನ್ನೆಲೆಯಲ್ಲಿ ಸ್ವಿಸ್ ಬ್ಯಾಂಕು ಈ ವಿವರಣೆ ನೀಡಿದೆ.
ಸ್ವಿಸ್ ಬ್ಯಾಂಕಿನಲ್ಲಿ ಇರುವ ಠೇವಣಿಗಳ ಕುರಿತು ಕೆದಕಿರುವ ಪ್ರಮುಖ ವಿರೋಧ ಪಕ್ಷವಾಗಿರುವ ಬಿಜೆಪಿ ಇದನ್ನು ಪ್ರಧಾನ ಚುನಾವಣಾ ವಿಷಯವನ್ನಾಗಿಸಿತ್ತು. |