ಕಳೆದ ನವೆಂಬರ್ 26ರಂದು ಮುಂಬೈದಾಳಿ ನಡೆಸಿ ಹಲವಾರು ಅಮಾಯಕರನ್ನು ಕೊಂದಿರುವ ಉಗ್ರ ಅಜ್ಮಲ್ ಅಮೀರ್ ಕಸಬ್ ಅಪ್ರಾಪ್ತ ವಯಸ್ಕನೆಂಬ ವಾದವನ್ನು ತಳ್ಳಿಹಾಕಿರುವ ಮುಂಬೈನ ವಿಶೇಷ ನ್ಯಾಯಾಲಯ ಒಂದು ಆತ ಪ್ರಾಪ್ತ ವಯಸ್ಕನೆಂದು ಹೇಳಿದ್ದು, ಪ್ರಕರಣದ ವಿಚಾರಣೆಯು ಪ್ರಸಕ್ತ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತದೆ ಎಂಬ ತೀರ್ಪು ನೀಡಿದೆ.
ಮುಂಬೈ ದಾಳಿ ನಡೆಸಿರುವ ವೇಳೆ ಕಸಬ್ 21ರ ಹರೆಯದವನಾಗಿದ್ದ ಎಂದು ನ್ಯಾಯಾಲಯ ಹೇಳಿದೆ. ರಕ್ತ ಪರೀಕ್ಷೆ ಮತ್ತು ಮೂಳೆ ಪರೀಕ್ಷೆಯ ಆಧಾರದಲ್ಲಿ ಈ ತೀರ್ಪು ನೀಡಲಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಜೈಲ್ ಸುಪರಿಂಟೆಂಡೆಂಟ್ ಸ್ವಾತಿ ಸಾಥೆ ಮತ್ತು ವಿ. ರಮಣಮೂರ್ತಿ ಅವರು ಕಸಬ್ ತನಗೆ 21 ವರ್ಷ ವಯಸ್ಸು ಎಂದು ಹೇಳಿರುವ ಸಾಕ್ಷಿಯನ್ನು ನ್ಯಾಯಾಲಯ ಸ್ವೀಕರಿಸಿದೆ.
ಇದಲ್ಲದೆ, ಈತನ ವಯಸ್ಸಿನ ಪತ್ತೆಗಾಗಿ ಎಕ್ಸ್ ರೇ ಪ್ಲೇಟ್‌ಗಳಿಗೆ ಅನುಮತಿ ನೀಡಬೇಕು ಎಂದು ಕೋರಲಾಗಿದ್ದ ಅರ್ಜಿಯನ್ನು ನ್ಯಾಯಾಧೀಶರು ತಳ್ಳಿಹಾಕಿದರು. ಅಜ್ಮಲ್ ಕಸಬ್ ವಕೀಲರಾಗಿರುವ ಅಬ್ಬಾಸ್ ಖಾಜ್ಮಿ ಅವರಿಗೆ ಈ ಅವಕಾಶವನ್ನು ಇದೀಗಾಗಲೇ ನೀಡಲಾಗಿದ್ದು ಅವರು ಈ ಆಯ್ಕೆಯನ್ನು ನಿರಾಕರಿಸಿದ್ದರು ಎಂದು ಹೇಳಿದರು.
ಕಸಬ್ ಅಪ್ರಾಪ್ತನಾಗಿದ್ದು ಆತನನ್ನು ಬಾಲಾಪರಾಧಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕು ಎಂಬ ಆತನ ವಕೀಲರ ವಿನಂತಿಯ ಹಿನ್ನೆಲೆಯಲ್ಲಿ ವಯಸ್ಸು ಪತ್ತೆಗಾಗಿ ವೈದ್ಯಕೀಯ ಪರೀಕ್ಷೆಗೆ ನ್ಯಾಯಾಧೀಶರು ಆದೇಶಿಸಿದ್ದರು. |