ಅನಿಲ್ ಅಂಬಾನಿ ಅವರ ಹೆಲಿಕಾಫ್ಟರ್ ಧ್ವಂಸ ಫಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಕ್ರೈಂ ಬ್ರಾಂಚ್ ಏರ್‌ವರ್ಕ್ಸ್ ಸಂಸ್ಥೆಯ ಇಬ್ಬರು ಉದ್ಯೋಗಿಗಳನ್ನು ಬಂಧಿಸಿದೆ. ಅಂಬಾನಿ ಅವರ ಹೆಲಿಕಾಫ್ಟರ್ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದ ಏರ್‌ವರ್ಕ್ಸ್ ಕಂಪೆನಿಯ ಉದಯ್ ವಾರೆಕರ್ ಮತ್ತು ಪಾಲ್‌ರಾಜ್ ತೇವರ್ ಎಂಬಿಬ್ಬರೀಗ ಪೊಲೀಸರ ಬಂಧನದಲ್ಲಿದ್ದಾರೆ.
ಹೆಲಿಕಾಫ್ಟರ್ ಧ್ವಂಸಕ್ಕೆ ಕಾರ್ಪೋರೆಟ್ ವೈಮಸ್ಸು ಕಾರಣ ಎಂಬುದನ್ನು ಪೊಲೀಸರು ತಳ್ಳಿಹಾಕಿದ್ದಾರೆ. ಈ ಪ್ರಕರಣದ ಪ್ರಧಾನ ಸಾಕ್ಷಿಯಾಗಿದ್ದ ಭರತ್ ಬೋರ್ಗೆ ಎಂಬವರು ವಿಲೆ ಪಾರ್ಲೆಯ ರೈಲ್ವೇ ಹಳಿಯಲ್ಲಿ ಎಪ್ರಿಲ್ 28ರಂದು ಶವವಾಗಿ ಪತ್ತೆಯಾಗಿದ್ದರು. ಸಂಚುಕೋರರ ಹೆಸರು ಬಹಿರಂಗ ಪಡಿಸುವಂತೆ ಭರತ್ ಅವರು ಅನಿಲ್ ಧೀರೂಬಾಯಿ ಅಂಬಾನಿ ಬಳಗ ಹಾಗೂ ಪೊಲೀಸರಿಂದ ತೀವ್ರ ಒತ್ತಡಕ್ಕೀಡಾಗಿದ್ದರು ಎಂದು ಈ ಹಿಂದೆ ಮೂಲಗಳು ಹೇಳಿದ್ದವು.
ಹೆಲಿಕಾಫ್ಟರ್‌ನ ಇಂಧನ ಟ್ಯಾಂಕಿನಲ್ಲಿ ಸಣ್ಣಕಲ್ಲುಗಳು ಮತ್ತು ಮರಳನ್ನು ಬೋರ್ಗೆ ಎಪ್ರಿಲ್ 23ರಂದು ಪತ್ತೆಮಾಡಿದ್ದರು. ಮತ್ತು ಅವರು ಈ ವಿಚಾರವನ್ನು ಮೇಲಧಿಕಾರಿಗಳಿಗೆ ತಿಳಿಸಿದ್ದರಾದರೂ ಈ ಕೃತ್ಯವನ್ನು ನಡೆಸಿದವರ ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಿದ್ದರು. ಅವರು ಸಾಯುವುದಕ್ಕೆ ಮುನ್ನು ಮೂರು ದಿನಗಳ ಕಾಲ ಅವರನ್ನು ಪ್ರಶ್ನಿಸಲಾಗಿತ್ತು. |