ಕಾಶ್ಮೀರ ವಿವಾದದಲ್ಲಿ ತಾನು ತಲೆಹಾಕುವುದಿಲ್ಲ ಎಂಬುದಾಗಿ ತಾಲಿಬಾನ್ ಹೇಳಿದೆ. ಕಾಶ್ಮೀರಿಗಳು ಶರಿಯಾ ಅಥವಾ ಇಸ್ಲಾಮಿಕ್ ಕಾನೂನಿಗೆ ಒತ್ತಾಯಿಸದಿರುವ ಕಾರಣ ಈ ನಿಲುವು ಹೊಂದಿರುವುದಾಗಿ ಉಗ್ರಗಾಮಿ ಸಂಘಟನೆ ಹೇಳಿದೆ.
ಉಗ್ರರ ಪರವಾಗಿ ಪಾಕಿಸ್ತಾನಿ ಪ್ರಾಧಿಕಾರದೊಂದಿಗೆ ಮಾತುಕತೆ ನಡೆಸುತ್ತಿರುವ ನಿಷೇಧಿತ ಸಂಘಟನೆ ತೆಹ್ರಿಕ್-ಇ-ನಿಫಾಜ್-ಇ ಶರಿಯಾ ಮುಹಮ್ಮದಿ(ಟಿಎಸ್ಎನ್ಎಂ)ಯ ನಾಯಕ ಸೂಫಿ ಮೊಹಮ್ಮದ್ ಅವರು ಈ ವಿಚಾರವನ್ನು ಹೊರಸೂಸಿದ್ದಾರೆ. ಜಿಯೋ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಸೂಫಿ ಅವರು ಈ ವಿಚಾರ ವ್ಯಕ್ತಪಡಿಸಿದ್ದಾರೆ.
ಸಂದರ್ಶನದ ಆಯ್ದಭಾಗ ಇಂತಿದೆ. ಜಿಯೋ ಟಿವಿ: ಕಾಶ್ಮೀರಿ ಮಂದಿ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದಾರೆ. ಅಲ್ಲದೆ ಅವರು ಕಾಶ್ಮೀರದಲ್ಲಿ ಶರಿಯಾ ಜಾರಿಯನ್ನು ಬಯಸುತ್ತಿದ್ದಾರೆ. ಪಾಕಿಸ್ತಾನವೂ ಸಹ ಕಾಶ್ಮೀರ ತನ್ನ ಅವಿಭಾಜ್ಯ ಅಂಗ ಎಂದು ಹೇಳಿಕೊಳ್ಳುತ್ತಿದೆ. ನೀವ್ಯಾಕೆ ಅವರಿಗೆ ಸಹಾಯಮಾಡಬಾರದು?
ಸೂಫಿ ಮೊಹಮ್ಮದ್: ಕಾಶ್ಮೀರಿಗಳು ಶರಿಯಾ ಕಾನೂನು ಬೇಕು ಎಂದು ಯಾವತ್ತೂ ಹೇಳಿಲ್ಲ. ಅವರು ಸ್ವಾಯತ್ತತೆಗಾಗಿ ಹೋರಾಡುತ್ತಿದ್ದಾರೆ
ಜಿಯೋ: ಅಂದರೆ, ಕಾಶ್ಮೀರಿ ಜಿಹಾದ್‌ಗೂ ಪಾಕಿಸ್ತಾನಿಗಳಿಗೂ ಯಾವುದೇ ಸಂಬಧವಿಲ್ಲವೇ?
ಮೊಹಮ್ಮದ್: ಕಾಶ್ಮೀರಗಳಿಗೆ ಶರಿಯಾ ಕಾನೂನು ಬೇಕು ಎಂಬುದಾಗಿ ನಮಗೆಂದೂ ಕೇಳಿಬಂದಿಲ್ಲ. ಅವರು ತಮಗೆ ಪಾಕಿಸ್ತಾನಕ್ಕೆ ಪ್ರವೇಶ ಬೇಕು ಎಂದು ಹೇಳುತ್ತಾರೆ ಮತ್ತು ಪಾಕಿಸ್ತಾನವೂ ಕಾಶ್ಮೀರವನ್ನು ಅವಿಭಾಜ್ಯ ಅಂಗವೆಂದು ಹೇಳುತ್ತಿದೆ. ಎಲ್ಲಿಯೂ ಶರಿಯಾದ ಪ್ರಸ್ತಾಪವೇ ಇಲ್ಲ. |