ನಿರಾಶ್ರಿತರಾಗಿರುವ ಕಾಶ್ಮೀರಿ ಪಂಡಿತರ ಮೇಲೆ ಇತ್ತೀಚೆಗೆ ಜಮ್ಮುವಿನಲ್ಲಿ, ಜಮ್ಮು ಕಾಶ್ಮೀರ ಪೊಲೀಸರು ಎಸಗಿದ್ದಾರೆನ್ನಲಾಗಿರುವ ದೌರ್ಜನ್ಯ, ಹಲ್ಲೆ ಹಾಗೂ ಬಂಧನವನ್ನು ಇಂಡೋ-ಅಮೆರಿಕನ್ ಕಾಶ್ಮೀರ ವೇದಿಕೆ(ಐಎಕೆಎಫ್)ಯು ಬಲವಾಗಿ ಖಂಡಿಸಿದೆ.
ತಮ್ಮ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ಮತ್ತು ತಮ್ಮ ವಿರುದ್ಧ ಚುನಾವಣಾ ಆಯೋಗವು ಹೊಂದಿದೆ ಎನ್ನಲಾಗಿರುವ ಪಕ್ಷಪಾತಿತನದ ನೀತಿಗಳ ವಿರುದ್ಧ ಕಾಶ್ಮೀರಿ ಹಿಂದೂಗಳು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಅವರ ಮೇಲೆ ಹಲ್ಲೆ ನಡೆಸಿ ಬಂಧಿಸಲಾಗಿದೆ ಎಂಬುದಾಗಿ ಐಎಕೆಎಫ್ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಇದೀಗಾಗಲೇ ಭಯೋತ್ಪಾದನೆಯಿಂದಾಗಿ ಮನೆಮಠಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿರುವ ಕಾಶ್ಮೀರಿ ಪಂಡಿತರಿಗೆ ಮತದಾರರ ಪಟ್ಟಿಯನ್ನು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಅಳವಡಿಸಲಾಗಿರುವ ಸಂಕೀರ್ಣ ಪ್ರಕ್ರಿಯೆ ಮತ್ತು ಪಕ್ಷಪಾತಿತನದ ಕುತಂತ್ರದಿಂದಾಗಿ ಸಾವಿರಾರು ಮಂದಿ ಮತದಾನದದಿಂದ ವಂಚಿತರಾಗಿದ್ದಾರೆ ಎಂದು ವೇದಿಕೆ ಆಪಾದಿಸಿದೆ.
ಭಯೋತ್ಪಾದನೆಯಿಂದಾಗಿ ನಿರಾಶ್ರಿತರಾಗಿರುವ ಕಾಶ್ಮೀರ ಪಂಡಿತರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಅನುಕೂಲವಾಗುವಂತೆ ನೋಂದಣಿ ಪ್ರಕ್ರಿಯೆಯನ್ನು ತಕ್ಷಣವೇ ಸರಳೀಕೃತಗೊಳಿಸಬೇಕು ಎಂದು ವೇದಿಕೆಯು ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.
ಮತದಾರರ ಪಟ್ಟಿಯನ್ನು ಸರಿಪಡಿಸಲು ತಕ್ಷಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವೇದಿಕೆಯು ಭಾರತ ಸರ್ಕಾರವನ್ನೂ ಒತ್ತಾಯಿಸಿದ್ದು ಈ ಎಲ್ಲ ದುಷ್ಕೃತ್ಯಗಳಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಅಪರಾಧಿ ಪ್ರಕರಣ ನಡೆಸಬೇಕು ಎಂದು ವೇದಿಕೆ ತನ್ನ ಹೇಳಿಕೆಯಲ್ಲಿ ಒತ್ತಾಯಿಸಿದೆ. |