ತನ್ನ ಪಕ್ಷವು ಕೇಂದ್ರದಲ್ಲಿ ಅಧಿಕಾರ ಹಿಡಿದು ತಾನು ಪ್ರಧಾನಿ ಪಟ್ಟವನ್ನೇರಲು ವಿಫಲವಾದರೂ, ಪಕ್ಷವು ಮುಂದಿನ ಸರ್ಕಾರ ರಚಿಸುವಲ್ಲಿ ಪ್ರಧಾನ ಪಾತ್ರವಹಿಸಲಿದೆ ಎಂಬುದಾಗಿ ಬಿಎಸ್ಪಿ ವರಿಷ್ಠೆ ಮಾಯಾವತಿ ಹೇಳಿದ್ದಾರೆ." ಬಿಎಸ್ಪಿ ಇಲ್ಲದೆ ಯಾವ ಪಕ್ಷವೂ ಸರ್ಕಾರ ರೂಪಿಸಲು ಸಾಧ್ಯವಿಲ್ಲ" ಎಂದು ಅವರು ದಾದ್ರಿ ಗೌತಮ ಬುದ್ಧ ನಗರ ಮತ್ತು ಗಜಿಯಾಬಾದ್‌ಗಳಲ್ಲಿ ತನ್ನ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರಮಾಡುತ್ತಾ ನುಡಿದರು." ನನಗೆ ಈಗ ದೆಹಲಿ ಏನೂ ದೂರವಿಲ್ಲ ಆದರೆ, ತನ್ನ ಪಕ್ಷವು ಸಾಕಷ್ಟು ಸಂಖ್ಯೆಯನ್ನು ಗೆಲ್ಲಲು ವಿಫಲವಾದರೂ ಅದು ಮುಂದಿನ ಸರ್ಕಾರ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ" ಎಂದು ಮಾಯವತಿ ಹೇಳಿದ್ದಾರೆ.ಬಿಜೆಪಿ ಮತ್ತು ಕಾಂಗ್ರೆಸ್‌ಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಅವರು ಉಭಯ ಪಕ್ಷಗಳು ಒಬ್ಬೇ ಒಬ್ಬ ದಲಿತ ಅಭ್ಯರ್ಥಿಯ ಹೆಸರನ್ನು ಪ್ರಧಾನಿ ಹುದ್ದೆಗೆ ಸೂಚಿಸಲಿಲ್ಲ ಎಂದು ನುಡಿದರು. ಅಲ್ಲದೆ ಈ ಎರಡೂ ಪಕ್ಷಗಳೂ ತಮ್ಮ ಸ್ವಂತ ಹಿತಾಸಕ್ತಿಗಾಗಿ ದಲಿತರನ್ನು ಶೋಷಿಸುತ್ತಿವೆ ಆದರೆ ಅವರ ಪರಿಸ್ಥಿತಿಯನ್ನು ಸುಧಾರಿಸಲು ಏನೂ ಮಾಡುತ್ತಿಲ್ಲ ಎಂದು ದೂರಿದ್ದಾರೆ.ದಲಿತರ ಮನೆಗಳಲ್ಲಿ ಊಟಮಾಡಿ ಮಲಗಿದ ಮಾತ್ರಕ್ಕೆ ಅವರ ನೋವುಗಳನ್ನು ಅರ್ಥೈಸಿಕೊಂಡು ಅವರ ಪರಿಸ್ಥಿತಿಯನ್ನು ಸುಧಾರಿಸಿದಂತೆ ಆಗಲಿಲ್ಲ ಎಂದು ಅವರು ರಾಹುಲ್ ಗಾಂಧಿಯನ್ನು ಟೀಕಿಸಿದರು. ಮತದಾರರು ಮೂರ್ಖರಲ್ಲ, ಅವರು ನೈಜತೆ ಮತ್ತು ನಾಟಕದ ನಡುವಿನ ವ್ಯತ್ಯಾಸವನ್ನು ಕಂಡುಕೊಳ್ಳಬಲ್ಲವರಾಗಿದ್ದಾರೆ ಎಂದು ಮಾಯಾವತಿ ನುಡಿದರು. |