ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಎಡಪಕ್ಷಗಳು ಪ್ರಧಾನಿಯಾಗಿ ಒಪ್ಪಿಕೊಳ್ಳಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರು ಚುನಾವಣೋತ್ತರ ಪರಿಸ್ಥಿತಿಯಲ್ಲಿ ಎಡಪಕ್ಷಗಳೊಂದಿಗೆ ಹೊಂದಾಣಿಕೆಯ ಸ್ಪಷ್ಟ ಸುಳಿವು ನೀಡಿದ್ದಾರೆ.ನಾವು ಕೇಂದ್ರದಲ್ಲಿ ಅಧಿಕಾರ ಹಿಡಿಯಲೆಂದೇ ಚುನಾವಣೆಯಲ್ಲಿ ಸ್ಫರ್ಧಿಸುತ್ತಿದ್ದೇವೆಯೇ ಹೊರತಾಗಿ ಸೋತು ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲಲ್ಲ ಎಂದು ಅವರು ಹೇಳಿದಲ್ಲದೆ, ಯುಪಿಎ ಮೈತ್ರಿ ಕೂಟ ಮ್ಯಾಜಿಕ್ ಸಂಖ್ಯೆಯನ್ನು ಗೆಲ್ಲಲಿದೆ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದರು.ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಮನಮೋಹನ್ ಸಿಂಗ್ ಅವರೇ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂಬುದಾಗಿ ಪುನರುಚ್ಚರಿಸಿದರಲ್ಲದೆ, ಯುಪಿಎ ಮೈತ್ರಿಕೂಟದ ಆಯ್ಕೆಯೂ ಸಹ ಮನಮೋಹನ್ ಸಿಂಗ್ ಅವರೇ ಆಗಿದ್ದಾರೆ ಎಂದು ನುಡಿದರು. ಅಲ್ಲದೆ ಈ ರಾಷ್ಟ್ರ ಹೊಂದ ಬಹುದಾದ ಶ್ರೇಷ್ಠ ಪ್ರಧಾನಿ ಮನಮೋಹನ್ ಎಂದು ಅವರು ಸರ್ಟಿಫಿಕೇಟ್ ನೀಡಿದರು. ಇತ್ತೀಚೆ ಸಂದರ್ಶನ ಒಂದರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಹುಲ್ ಗಾಂಧಿ ಪ್ರಧಾನಿಯಾಗುವ ಎಲ್ಲಾ ಗುಣಲಕ್ಷಣಗಳಿವೆ ಎಂದು ಹೇಳಿದ್ದರು.ಅಣುಒಪ್ಪಂದವು ಹಳೆಯವಿಚಾರವಾಗಿದೆ ಎಂದು ನುಡಿದ ಅವರು ಎಡಪಕ್ಷಗಳು ಮತ್ತು ಕಾಂಗ್ರೆಸ್ ಸಮಾನ ಅಭಿಪ್ರಾಯಗಳನ್ನು ಹೊಂದಿರುವ ಕಾರಣ ಮತ್ತೆ ಅವರೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಕಷ್ಟವಾಗಲಾರದು ಎಂದು ನುಡಿದರು. ಎಡಪಕ್ಷಗಳು ಕಾಂಗ್ರೆಸ್ ಹೊರತು ಪಡಿಸಿದರೆ ಬೇರೆ ಪಕ್ಷಗಳೊಂದಿಗೆ ಸಂತೋಷದಿಂದ ಇರಲಾರರು ಎಂದು ಹೇಳಿದ ರಾಹುಲ್ ಗಾಂಧಿ, ಮನಮೋಹನ್ ಸಿಂಗ್ ಅವರನ್ನು ಎಡಪಕ್ಷಗಳು ಬೆಂಬಲಿಸಲೇ ಬೇಕೆಂದು ತನಗನ್ನಿಸುತ್ತದೆ ಎಂದು ನುಡಿದರು.ಎಡಪಕ್ಷಗಳು 190 ಸ್ಥಾನಗಳನ್ನು ಪಡೆಯಲು ಯಶಸ್ವಿಯಾದಲ್ಲಿ ಅವರನ್ನು ಕಾಂಗ್ರೆಸ್ ಬೆಂಬಲಿಸಲಿದೆ ಎಂದೂ ಅವರು ನುಡಿದರು. ಮುಂದೆ ನಿಮ್ಮ ಪಕ್ಷ ಅಧಿಕಾರಕ್ಕೇರಿದರೆ ಸಚಿವರಾಗುವಿರೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಧಾನಿ ಹಾಗೂ ಬಾಸ್ ಒತ್ತಾಯಿಸಿದರೆ ಮಾತ್ರ ಪರಿಗಣಿಸುವುದಾಗಿ ಅವರು ನುಡಿದರು.ಬೋಫೋರ್ಸ್ ಹಗರಣವು ಮುಗಿದು ಹೋದ ವಿಷಯ ಹಾಗೂ ಪ್ರತಿಚುನಾವಣಾ ಸಂದರ್ಭದಲ್ಲಿ ಅದನ್ನು ಉದ್ದೇಶಪೂರ್ವಕವಾಗಿ ಕೆದಕಲಾಗುತ್ತದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ನುಡಿದರು. |