ಎಪ್ಪತ್ತು ದಾಟಿದ ಮುದುಕ ರಾಜಕಾರಣಿಗಳು ಚಿರಯವ್ವನಿಗರಂತೆ ಚುನಾವಣೆ ಬಿಸಿಯಲ್ಲಿ ತೊಡಗಿಕೊಂಡದ್ದು ನೋಡಿದರೆ ಯುವಜನತೆ ನಿಜಕ್ಕೂ ನಾಚಿಕೆಪಟ್ಟುಕೊಳ್ಳಬೇಕು. ಹಾಗಾದರೆ, ಈ ಮುದುಕ ರಾಜಕಾರಣಿಗಳ ಯೌವ್ವನದ ಗುಟ್ಟೇನು ಎಂಬ ಪ್ರಶ್ನೆಯೂ ಉದ್ಭವಿಸುವುದು ಸಹಜ. ಇದಕ್ಕೆ ಉತ್ತರ- ಚುರುಕಿನ ದಿನನಿತ್ಯದ ಕಾರ್ಯಚಟುವಟಿಕೆಗಳು, ಹಿತಮಿತವಾದ ಆಹಾರ, ಜನರೊಂದಿಗೆ ನಿತ್ಯ ಬೆರೆಯುವಿಕೆ, ಅಂತಃಶಕ್ತಿ ಇವೇ ರಾಜಕಾರಣಿಗಳಲ್ಲಿ ಯವ್ವನದ ಶಕ್ತಿಯನ್ನು ಉದ್ದೀಪನಗೊಳಿಸುವ ಸಾಧನಗಳು!ನವದೆಹಲಿಯ ಮ್ಯಾಕ್ಸ್ ಹಾರ್ಟ್ ಅಂಡ್ ವ್ಯಾಸ್ಕ್ಯುಲಾರ್ ಇನ್‌ಸ್ಟಿಟ್ಯೂಟ್‌ನ ಮುಖ್ಯಸ್ಥ ಅಶೋಕ್ ಸೇಥ್ ಹೇಳುವಂತೆ, ನನಗೆ ನಿಜಕ್ಕೂ 70 ದಾಟಿದ ರಾಜಕಾರಣಿಗಳ ರಾಜಕೀಯ ಉತ್ಸಾಹ ನೋಡಿದರೆ ಆಶ್ಚರ್ಯವೆನಿಸುತ್ತದೆ. ಬಹಳಷ್ಟು ಮಂದಿ ಸಾಮಾನ್ಯ ಜನತೆ 60 ದಾಟಿದರೆ ಶಕ್ತಿಯೆಲ್ಲ ಕಳೆದುಕೊಂಡು ಹಲವು ಆರೋಗ್ಯದ ಸಮಸ್ಯೆ ಎದುರಿಸುತ್ತಾರೆ. ಕೆಲಸದ ಉತ್ಸಾಹ ಕಳೆದುಕೊಳ್ಳುತ್ತಾರೆ. ಈದರೆ ರಾಜಕಾರಣಿಗಳು ವಯಸ್ಸು ದಾಟುತ್ತಾ ಹೋದಂತೆ ಉತ್ಸಾಹ ಹೆಚ್ಚುತ್ತಾ ಹೋಗುತ್ತದೆ ಎನ್ನುತ್ತಾರೆ.ಈ ಪ್ರಶ್ನೆಗೆ ಉತ್ತರವೂ ಅಶೋಕ್ ಸೇಥ್ ಬಳಿಯಿದೆ. ಚುನಾವಣಾ ಪ್ರಚಾರದಂತಹ ಚಟುವಟಿಕೆಗಳು ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ, ದಿನನಿತ್ಯ ಭಾಷಣ, ಮತದಾರರ ಜತೆ ಮಾತುಕತೆ, ಪ್ರಚಾರ ಅಡ್ರೆನಲೈನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ಪ್ರೇರಣೆ ಸಿಕ್ಕಿದಂತಾಗಿ ಅವರು ದಿನನಿತ್ಯ ಆರೋಗ್ಯದ ತೊಂದರೆಗೆ ಒಳಗಾಗುವುದಿಲ್ಲ ಎನ್ನುತ್ತಾರೆ ಸೇಥ್.76 ರ ಹರೆಯದ ಪ್ರಧಾನಿ ಮನಮೋಹನ್ ಸಿಂಗ್ ಇತ್ತೀಚೆಗೆ ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆಯ ನಂತರ ಬಹುಬೇಗ ಗಣಮುಖರಾಗಿದ್ದಾರೆಂದು ಹೇಳಿಕೊಂಡರೂ ಅಷ್ಟಾಗಿ ಸಾರ್ವಜನಿಕ ಚುನಾವಣಾ ಪ್ರಚಾರಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಮುಖ್ಯವಾಗಿ ಅವರ ಪ್ರತಿಸ್ಪರ್ಧಿ ಬಿಜೆಪಿ ಮುಖಂಡ 81ರ ಹರೆಯದ ಎಲ್.ಕೆ.ಅಡ್ವಾಣಿಯವರಷ್ಟು ಉತ್ಸುಕರಾಗಿ ಕಾಣಿಸಲಿಲ್ಲ. ಆದರೆ ಪ್ರಧಾನಿ ಮನಮೋಹನ್ ಸಿಂಗ್ ಅವರ ಖಾಸಗಿ ವೈದ್ಯರಾದ ಕೆ.ಎಸ್.ರೆಡ್ಡಿ ಹೇಳುವಂತೆ, ಮನಮೋಹನ್ ಸಿಂಗ್ ಈಗ ಸಂಪೂರ್ಣ ಗುಣಮುಖರಾಗಿದ್ದಾರೆ. ಅವರು ಮೊದಲಿನಂತೆ ಯಾವ ಕಾರ್ಯದಲ್ಲೂ ಆರಾಮವಾಗಿ ತೊಡಗಿಕೊಳ್ಳಬಹುದು. ಇಂತಹ ಶೀಘ್ರ ಚೇತರಿಕೆ ಸಾಧ್ಯವಾಗಿದ್ದು ಅವರ ಆತ್ಮಬಲದಿಂದ ಎಂದು ಹೇಳುತ್ತಾರೆ. ಜತೆಗೆ, ರಾಜಕೀಯವಿರಬಹುದು, ಅಥವಾ ಇನ್ನು ಯಾವುದೇ ವಲಯದಲ್ಲಿ ಚೆನ್ನಾಗಿ ಕೆಲಸ ಮಾಡುತ್ತಲೇ ಇದ್ದರೆ, ಆರೋಗ್ಯವನ್ನು ಉತ್ತಮವಾಗಿ ಕಾಯ್ದುಕೊಳ್ಳಬಹುದು ಎನ್ನುತ್ತಾರೆ.ಅಡ್ವಾಣಿ ಪುತ್ರಿ ಪ್ರತಿಭಾ, ಯಾಕೆ ಮಾಧ್ಯಮದವರು ಪದೇ ಪದೇ ನನ್ನ ತಂದೆಯವರ ವಯಸ್ಸಿನ ಸುತ್ತಲೇ ಗಿರಕಿ ಹೊಡೆಯುತ್ತಿರುತ್ತಾರೋ ಅರ್ಥವಾಗುವುದಿಲ್ಲ ಎನ್ನುತ್ತಾರೆ.ಹಲವು ರಾಜಕಾರಣಿಗಳು ಉತ್ತಮ ಆಹಾರ ಪದ್ಧತಿ ರೂಪಿಸಿಕೊಂಡಿರುವುದರಿಂದ ಆರೋಗ್ಯ ಕಾಯ್ದುಕೊಳ್ಳುತ್ತಾರೆ. 69ರ ಹರೆಯದ ಸಮಾಜವಾದಿ ಮುಖಂಡ ಮುಲಾಯಂ ಸಿಂಗ್ ಯಾದವ್, 59ರ ಹರೆಯದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತಿತರರು ತಮ್ಮ ಆರೋಗ್ಯ ಕಾಯ್ದುಕೊಳ್ಳಲು ಯೋಗ, ಧ್ಯಾನವನ್ನು ನಿಯಮಿತವಾಗ ಮಾಡುತ್ತಾರೆ.ಮುಲಾಯಂ ಸಿಂಗ್ ಅವರ ಆಪ್ತ ರಾಜೇಂದ್ರ ಚೌಧರಿ ಹೇಳುವಂತೆ ಮುಲಾಯಂ ಅವರು ಗ್ರಾಮೀಣ ಪ್ರದೇಶದಿಂದ ಸಾಕಷ್ಟು ಕಷ್ಟಗಳನ್ನು ಎದುರಿಸಿ ಬಂದವರು. ಹಾಗಾಗಿ ಅವರಿಗೆ ಸಾಕಷ್ಟು ಆತ್ಮಬಲ ಇದೆ. 30 ವರ್ಷದ ರಾಜಕಾರಣದಲ್ಲಿ ಅವರು ಫಿಟ್ ಆಗಿಯೇ ಇದ್ದಾರೆ. ಪ್ರತಿದಿನವೂ ಸಾಮಾನ್ಯ ಊಟವನ್ನೇ ಮಾಡುತ್ತಾರೆ. ನಾಲ್ಕರಿಂದ ಐದು ಗಂಟೆ ನಿದ್ದೆ ಮಾಡುತ್ತಾರೆ. ಬೇಸಿಗೆಯಲ್ಲಿ ತಂಪು ಪಾನೀಯಗಳನ್ನು, ಹಾಗೂ ಸಾಕಷ್ಟು ನೀರು ಕುಡಿಯುತ್ತಾರೆ ಎಂದು ವಿವರಿಸುತ್ತಾರೆ.ದೆಹಲಿಯ ಖ್ಯಾತ ಮನಶಾಸ್ತ್ರಜ್ಞ ಸಮೀರ್ ಪರೀಖ್ ಹೇಳುವಂತೆ, ಸೋಲಬಾರದು ಹಾಗೂ ಸೋಲುವುದಿಲ್ಲ ಎಂಬ ಛಲವೇ ರಾಜಕಾರಣಿಗಳನ್ನು ಮಾನಸಿಕವಾಗಿ ದೃಢರನ್ನಾಗಿ ಮಾಡಿದೆ ಹಾಗೂ ಅವರ ಆತ್ಮಬಲವನ್ನು ಹೆಚ್ಚಿಸುತ್ತದೆ. ಇದೇ ಅವರ ಉತ್ತಮ ಆರೋಗ್ಯಕ್ಕೆ ಪೂರಕ ಎನ್ನುತ್ತಾರೆ.ಶೇ.65ರಷ್ಟು ಭಾರತೀಯ ಮತದಾರರು 35ಕ್ಕಿಂತ ಕಡಿಮೆ ವಯಸ್ಸಿನವರು. ಅಲ್ಲದೆ 100 ಮಿಲಿಯನ್ ಮಂದಿ ಈ ಬಾರಿ ಮೊದಲ ಬಾರಿ ಮತ ಚಲಾಯಿಸುತ್ತಿರುವವರು. ಹಾಗಾಗಿ, ಯುವ ಮತದಾರರನ್ನು ಸೆಳೆಯಲು ವಯಸ್ಸಾದರೂ ರಾಜಕಾರಣಿಗಳೂ ಯುವಕರಾಗಲೇಬೇಕಾಗುತ್ತದೆ. |