ದೆಹಲಿ ಮುಖ್ಯಮಂತ್ರಿ ಶೀಲಾದೀಕ್ಷಿತ್ ಅವರು ಚುನಾವಣಾ ಬಳಿಕ ಜೆಡಿ(ಯು) ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳಬಹುದು ಎಂಬುದಾಗಿ ನೀಡಿರುವ ಹೇಳಿಕೆಯನ್ನು ಅಲ್ಲಗಳೆದಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಈ ಹೇಳಿಕೆಯು 'ಸುಳ್ಳು ಮತ್ತು ಆಧಾರ ರಹಿತವಾದುದು' ಎಂಬುದಾಗಿ ಹೇಳಿದ್ದಾರೆ.
ಖಾಸಗೀ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ವೇಳೆ ಶೀಲಾ ಅವರು ನೀಡಿರುವ ಹೇಳಿಕೆಯನ್ನು ಜೆಡಿಯುವಿನ ರಾಷ್ಟ್ರೀಯ ವಕ್ತಾರ ಹಾಗೂ ರಾಜ್ಯಸಭಾ ಸದಸ್ಯರೂ ಆಗಿರುವ ಶಿವಾನಂದ ತಿವಾರಿ ಅವರು ಅಲ್ಲಗಳೆದಿದ್ದು, ತಮ್ಮ ಪಕ್ಷವು ಎನ್‌ಡಿಎಯ ಅಂಗಪಕ್ಷವಾಗಿದ್ದು ಹಾಗೆಯೇ ಉಳಿಯಲಿದೆ ಎಂದು ಹೇಳಿದ್ದಾರೆ.
"ಕೆಲವು ವ್ಯಕ್ತಿಗಳು ತಪ್ಪು ಮಾಹಿತಿ ನೀಡಲು ಪ್ರಯತ್ನಿಸುತ್ತಿದ್ದಾರೆ. ನಾವು ಶೀಲಾರನ್ನು ಗೌರವಿಸುತ್ತೇವೆಯಾದರೂ ಅವರು ಇಂತಹ ಚಿಲ್ಲರೆ ಮಾತುಗಳನ್ನಾಡುವುದನ್ನು ನಾವು ನಿರೀಕ್ಷಿಸುವುದಿಲ್ಲ" ಎಂದು ಅವರು ಗರಂ ಆಗಿ ಹೇಳಿದ್ದಾರೆ.
"ನಿತೀಶ್ ಕುಮಾರ್ ಅವರು ಕಾಂಗ್ರೆಸ್ ಜತೆ ಸೇರಿಕೊಳ್ಳುವ ಸುಳಿವು ನೀಡಿದ್ದಾರೆ. ಆದರೆ ಈ ಕುರಿತು ಅವರು ದೃಢಪಡಿಸಿಲ್ಲ. ಅವರು ಚುನಾವಣಾ ಫಲಿತಾಂಶಗಳಿಗೆ ಕಾಯುತ್ತಿದ್ದು, ಯಾವಪಕ್ಷವನ್ನು ಬೆಂಬಲಿಸಬೇಕು ಎಂಬುದನ್ನು ನಿರ್ಧಸಲಿದ್ದಾರೆ" ಎಂದು ಶೀಲಾ ಸಂದರ್ಶನದಲ್ಲಿ ಹೇಳಿದ್ದರು.
ಕಾಂಗ್ರೆಸ್ ಮತ್ತು ನಿತೀಶ್ ನಡುವೆ ಕೆಲವು ಹಂತಕ್ಕೆ ಸಂಬಂಧಿಸಿದಂತೆ ಮಾತುಕತೆಗಳು ನಡೆಯುತ್ತಿರಬೇಕು. ಆದರೆ ನಿತೀಶ್ ಕಾಂಗ್ರೆಸನ್ನು ಬೆಂಬಲಿಸುತ್ತಾರೋ ಇಲ್ಲವೋ ಎಂದು ಹೇಳಲಾಗದು ಎಂದೂ ದೆಹಲಿ ಮುಖ್ಯಮಂತ್ರಿ ಹೇಳಿದ್ದರು. |