ಚುನಾವಣೋತ್ತರ ರಾಜಕೀಯ ಪರಿಸ್ಥಿತಿಯಲ್ಲಿ ಯುಪಿಎ ಬಹುಮತ ಗಳಿಕೆ ಬಗ್ಗೆ ಕಾಂಗ್ರೆಸ್ಸಿಗೆ ಸ್ವತಃ ಸಂದೇಹವಿದೆ ಎಂಬ ಪ್ರತಿಪಕ್ಷಗಳ ಆರೋಪದ ನಡುವೆ, ತನ್ನನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವ ಕಾಂಗ್ರೆಸ್‌ಗೆ ಜೆಡಿಯು ಮುಖಂಡ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ "ಧನ್ಯವಾದಗಳು" ಎಂದಷ್ಟೇ ಹೇಳಿ ದೂರ ತಳ್ಳಿದ್ದಾರೆ.
ಒಂದು ಕಡೆಯಿಂದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರು ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಕೆಲಸ ಕಾರ್ಯಗಳನ್ನು ಶ್ಲಾಘಿಸಿದ್ದರೆ, ಮತ್ತೊಂದೆಡೆಯಿಂದ ಸಿಪಿಎಂ ಪೊಲಿಟ್ ಬ್ಯುರೋ ಸದಸ್ಯ ಸೀತಾರಾಮ ಯೆಚೂರಿ ಅವರು ಕೂಡ, ನಿತೀಶ್ ಅವರನ್ನು ಮುಕ್ತ ಕಂಠದಿಂದ ಶ್ಲಾಘಿಸಿ, ತೃತೀಯ ರಂಗಕ್ಕೆ ಆಹ್ವಾನಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ನಿತೀಶ್, "ನನ್ನನ್ನು ಹೊಗಳಿದ್ದಕ್ಕಾಗಿ ರಾಹುಲ್‌ಗೆ ಅಭಿನಂದನೆಯಷ್ಟೇ ಸಲ್ಲಿಸುತ್ತೇನೆ. ಆದರೆ, ಎನ್‌ಡಿಎ ತೊರೆದು ಯುಪಿಎಯೊಳಗೆ ಸೇರಿಕೊಳ್ಳುವ ಸಾಧ್ಯತೆಗಳಿಲ್ಲ" ಎಂದು ಉತ್ತರಿಸಿದ್ದಾರೆ.
ಇಂಥ ಊಹಾಪೋಹಗಳಿಗೆ ಆಧಾರವಿಲ್ಲ. ನಾನೆಲ್ಲಿದ್ದೇನೆಯೋ, ಅಲ್ಲೇ ಸಂತೋಷದಿಂದಿದ್ದೇನೆ. ಸರಕಾರ ಸರಿಯಾಗಿ ಚಲಾವಣೆಯಾಗುತ್ತಿದೆ, ಜನರು ಸಂತುಷ್ಟರಾಗಿದ್ದಾರೆ. ಹೊಸ ಮೈತ್ರಿಕೂಟದತ್ತ ಹೊರಡುತ್ತೇನೆಂಬ ಮಾತುಗಳಿಗೆ ಅರ್ಥವಿಲ್ಲ ಎಂದಿದ್ದಾರೆ ನಿತೀಶ್.
ಆದರೆ, ಬದ್ಧ ರಾಜಕೀಯ ವಿರೋಧಿ ಲಾಲೂ ಪ್ರಸಾದ್ ಯಾದವ್ ಅವರ ಆರ್‌ಜೆಡಿ ಇಲ್ಲದ ಯುಪಿಎಯನ್ನು ಸೇರುವ ಸಾಧ್ಯತೆಗಳಿವೆಯೇ ಎಂದು ಕೇಳಿದಾಗ ಮಾತ್ರ ನಿತೀಶ್ ಕುಮಾರ್ ನುಣುಚಿಕೊಳ್ಳಲು ಯತ್ನಿಸಿದರು. ನಾನು ಬಿಹಾರದ ಜನತೆಯ ಸೇವೆ ಮಾಡಿದ್ದೇನೆ, ಜನಾಭಿಪ್ರಾಯವೂ ನಮಗೆ ಪೂರಕವಾಗಿದೆ. ನಾವು ಈ ಚುನಾವಣೆಗಳಲ್ಲಿ ಧನಾತ್ಮಕ ಮತಗಳನ್ನು ಗಳಿಸುತ್ತೇವೆ ಎಂಬುದಷ್ಟೇ ಅವರ ಉತ್ತರವಾಗಿತ್ತು.
ಅಂತೆಯೇ, ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಬಾಯಿಯಿಂದ ಬಂದಂತೆ, ಪ್ರಧಾನಿ ಪದವಿಗೆ ತಾನು ಯೋಗ್ಯನಲ್ಲ ಎಂದೂ ನಿತೀಶ್ ಸ್ಪಷ್ಟಪಡಿಸಿದರು.
ಇತ್ತ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ರಾಹುಲ್ ಗಾಂಧಿ ಅವರು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮತ್ತು ಜೆಡಿಯು ಮುಖಂಡ ನಿತೀಶ್ ಅವರತ್ತ ಕಣ್ಣು ಮಿಟುಕಿಸುತ್ತಿರುವುದು ನೋಡಿದರೆ, ಆಂಧ್ರಪ್ರದೇಶ ಮತ್ತು ಬಿಹಾರದಲ್ಲಿ ಅದು ಈಗಾಗಲೇ ಸೋಲು ಒಪ್ಪಿಕೊಂಡಂತಾಗಿದೆ ಎಂದು ಪ್ರತಿಕ್ರಿಯಿಸಿದೆ.
ಈ ಎರಡು ರಾಜ್ಯಗಳಲ್ಲಿ ಸಂಪೂರ್ಣ ಗುಡಿಸಿ ಹೋಗುವುದರ ಮುಖಭಂಗದ ತೀವ್ರತೆ ಕಡಿಮೆ ಮಾಡಿಕೊಳ್ಳುವುದಕ್ಕಾಗಿಯೇ ರಾಹುಲ್ ಗಾಂಧಿ ಅವರು ನಾಯ್ಡು, ನಿತೀಶ್‌ರನ್ನು ಒಲಿಸಿಕೊಳ್ಳುವುದರತ್ತ ಚಿತ್ತ ಹರಿಸಿದ್ದಾರೆ ಎಂದು ಬಿಜೆಪಿ ವಕ್ತಾರ ಬಲಬೀರ್ ಪಂಜ್ ಟೀಕಿಸಿದ್ದಾರೆ. |