ಮುಂಬೈದಾಳಿ ಕೋರ ಅಜ್ಮಲ್ ಅಮೀರ್ ಕಸಬ್ ಪರ ವಕಾಲತ್ತು ನಡೆಸಲು ನಿರ್ಧರಿಸಿರುವ ಅಬ್ಬಾಸ್ ಕಾಜ್ಮಿಯನ್ನು ಇಸ್ಲಾಂ ಜಿಂಖಾನ ಧರ್ಮದರ್ಶಿ ಸ್ಥಾನದಿಂದ ತೊಡೆದು ಹಾಕಿರುವ ಮುಸ್ಲಿಂ ಮಂಡಳಿಯ ರಾಷ್ಟ್ರಭಕ್ತಿ ಸ್ಫೂರ್ತಿಗೆ ತಾನು ನಮಿಸುವುದಾಗಿ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆ ಹೇಳಿದ್ದಾರೆ.
"ಕಸಬ್ ಪರ ವಾದಿಸುವುದು ದೆವ್ವದ ವಕೀಲರಾದಂತೆ ಮತ್ತು ಇದು ಇಸ್ಲಾಂ ವಿರೋಧಿಯಾದುದು. ಇಂತಹ ಇಸ್ಲಾಂ ಅನ್ನು ನಾವು ರಾಷ್ಟ್ರೀಯ ಧರ್ಮವೆಂದು ಕರೆಯುತ್ತೇವೆ ಮತ್ತು ಅದಕ್ಕೆ ನಮಿಸುತ್ತೇವೆ" ಎಂದು ಠಾಕ್ರೆ, ಪಕ್ಷದ ಮುಖವಾಣಿ ಪತ್ರಿಕೆ ಸಾಮ್ನಾದಲ್ಲಿ ಬರೆದಿರುವ ಸಂಪಾದಕೀಯದಲ್ಲಿ ಹೇಳಿದ್ದಾರೆ.
"ಇದೇ ರೀತಿಯಲ್ಲಿ ಎಲ್ಲಾ ಮುಸ್ಲಿಮರು ವರ್ತಿಸಿದರೆ ಮತ್ತು ಜೀವಿಸಿದರೆ ಜಗಳವೇ ಇರುವುದಿಲ್ಲ" ಎಂಬುದಾಗಿ ಕಸಬ್ ವಕೀಲ ಅಬ್ಬಾಸ್ ಅವರನ್ನು ಜಿಂಖಾನದ ಟ್ರಸ್ಟಿ ಸ್ಥಾನದಿಂದ ಉಚ್ಚಾಟಿಸಿರುವ ಕ್ರಮಕ್ಕೆ ಠಾಕ್ರೆ ಪ್ರತಿಕ್ರಿಯಿಸಿದ್ದಾರೆ.
ಶುದ್ಧ ಗಾಳಿಯ ಸೇವನೆಗಾಗಿ ಜೈಲಿನ ಹಜಾರದಲ್ಲಿ ಓಡಾಡಲು ಅವಕಾಶ ನೀಡಬೇಕು ಎಂಬ ಕಸಬ್ ವಿನಂತಿಯನ್ನು ಹಾಸ್ಯಾಸ್ಪದ ಎಂದಿರುವ ಠಾಕ್ರೆ, "ಕಸಬ್ ಕೊಂದಿರುವ ವ್ಯಕ್ತಿಗಳೂ ಶುದ್ಧಗಾಳಿಯ ಸೇವನೆಯನ್ನು ಬಯಸಿದ್ದರು. ಆತ ಹಿಂದೂಗಳು ಮತ್ತು ಬಡ ಮುಸ್ಲಿಮರನ್ನು ಕೊಂದಿದ್ದಾನೆ" ಎಂದಿದ್ದಾರೆ. ಮತ್ತು ಅಬ್ಬಾಸ್ ಅವರನ್ನು ಉಚ್ಚಾಟಿಸುವ ಜಿಂಖಾನವು ಆದರ್ಶಮೆರೆದಿದ್ದು, ರಾಷ್ಟ್ರೀಯತೆಯನ್ನು ಪ್ರದರ್ಶಿಸಿದೆ ಎಂದು ಅವರು ನುಡಿದರು.
ಈ ಹಾದಿಯನ್ನು ಮುಸ್ಲಿಂ ಸಮುದಾಯ ಈ ಹಿಂದೆಯೂ ಅನುಸರಿಸಿದ್ದರೆ, ಭಾರತದ ಚ್ರಿತಣವೇ ಇಂದು ಬೇರೆಯಾಗಿರುತ್ತಿತ್ತು ಎಂದು ಠಾಕ್ರೆ ಅಭಿಪ್ರಾಯಿಸಿದ್ದಾರೆ.
"ಈ ರಾಷ್ಟ್ರದಲ್ಲಿ ಅಧಿಕಾರಸ್ಥರಿಂದ ಮುಸ್ಲಿಮರು ಪಡೆಯುತ್ತಿರುವ ರಕ್ಷಣೆಯು ಹಿಂದೂಗಳಿಗೆ ಲಭಿಸುತ್ತಿಲ್ಲ" ಎಂದು ಸೇನಾ ಮುಖ್ಯಸ್ಥರು ಹೇಳಿದ್ದಾರೆ. |