ಶ್ರೀಲಂಕಾದಲ್ಲಿ ಪ್ರತ್ಯೇಕ ತಮಿಳು ದೇಶಕ್ಕಾಗಿ ಹೋರಾಟ ನಡೆಸುತ್ತಿರುವ ಹೋರಾಟಗಾರರೊಂದಿಗೆ ತಮಿಳ್ನಾಡಿನ ಆಡಳಿತಾರೂಢ ಡಿಎಂಕೆ ಸೇರಿಕೊಂಡಿದ್ದು, ಪ್ರತ್ಯೇಕ ತಮಿಳು ಈಳಂ ರಚನೆಯ ಅರಿವಿನ ಜವಾಬ್ದಾರಿ ಇರುವುದಾಗಿ ಮುಖ್ಯಮಂತ್ರಿ ಕರುಣಾನಿಧಿ ಹೇಳಿದ್ದಾರೆ.
ವಿರೋಧ ಪಕ್ಷ ಎಐಎಡಿಎಂಕೆಯ ತೀವ್ರ ಒತ್ತಡ ಎದುರಿಸುತ್ತಿದ್ದ ಡಿಎಂಕೆ, ತಮಿಳ್ನಾಡಿನಲ್ಲಿ ಕೊನೆಯ ಹಂತದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಒಂದು ವಾರ ಇರುವಾಗ ಈ ನಿರ್ಧಾರಕ್ಕೆ ಬಂದಿದೆ.
ಶ್ರೀಲಂಕಾ ತಮಿಳರಿಗೆ ಪ್ರತ್ಯೇಕ ತಮಿಳು ರಾಷ್ಟ್ರ ನಿರ್ಮಾಣವು ಜಲಲಿತಾರ ಎಐಎಡಿಎಂಕೆಯ ಚುನಾವಣಾ ಪ್ರಣಾಳಿಕೆಯ ಅಂಶವಾಗಿದೆ. ಅಲ್ಲದೆ ಅವರು ತಮ್ಮ ಚನಾವಣಾ ಪ್ರಚಾರಗಳಲ್ಲಿಯೂ ಇದನ್ನೇ ಮುಖ್ಯ ವಿಚಾರವಾಗಿಸಿಕೊಳ್ಳುತ್ತಿದ್ದಾರೆ.
ಇದಲ್ಲದೆ, ಲೋಕಸಭಾ ಚುನಾವಣೆಯ ಬಳಿಕ ತಮ್ಮೊಲವಿನ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಶ್ರೀಲಂಕಾದಲ್ಲಿ ಪ್ರತ್ಯೇಕ ಈಳಂ ಸ್ಥಾಪನೆಗೆ ನೆರವಾಗಲು ಭಾರತದ ಸೇನೆಯನ್ನು ಕಳುಹಿಸುವುದಾಗಿಯೂ ಜಯಲಲಿತಾ ನುಡಿದರು.
ತಮಿಳ್ನಾಡಿನಲ್ಲಿ ಎಐಎಡಿಎಂಕೆಯ ಮಿತ್ರ ಪಕ್ಷಗಳಲ್ಲಿ ಎಲ್‌ಟಿಟಿಇ ಪರ ಹಾಗೂ ಈಳಂ ಪರ ಪಕ್ಷಗಳಾದ ಎಂಡಿಎಂಕೆ ಮತ್ತು ಪಿಎಂಕೆಗಳು ಸೇರಿವೆ.
ಈ ಎಲ್ಲ ಹಿನ್ನೆಲೆಯಲ್ಲಿ ತೀವ್ರ ಒತ್ತಡಕ್ಕೆ ಸಿಲುಕಿರುವ ಡಿಎಂಕೆಯೂ ಸಹ ಶ್ರೀಲಂಕಾದಲ್ಲಿ ತಮಿಳು ಈಳಂ ಬೆಂಬಲವನ್ನು ಘೋಷಿಸಿದ್ದಾರೆ. |