ಕೇಂದ್ರದಲ್ಲಿ ಸರ್ಕಾರ ರೂಪಿಸುವಲ್ಲಿ ಕಾಂಗ್ರೆಸ್ ಜೊತೆ ಕೈ ಜೋಡಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಹೇಳಿರುವ ಸಮಾಜವಾದಿ ಪಕ್ಷವು ಆ ಬಳಿಕ ಸಚಿವ ಸ್ಥಾನಗಳನ್ನು ಹೊಂದಲೂ ಸಹ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದೆ.
"ನಾನಿದನ್ನು ತಳ್ಳಿಹಾಕಲಾರೆ" ಎಂಬುದಾಗಿ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಾ ನುಡಿದರು. ಅವರು ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ಹುಟ್ಟೂರಾದ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಸರ್ಕಾರ ರೂಪಿಸುವಲ್ಲಿ ಸಮಾಜವಾದಿ ಪಕ್ಷವು ಕಾಂಗ್ರೆಸ್ ಜತೆ ಸೇರಿಕೊಳ್ಳಲಿದೆಯೇ ಎಂಬ ನೇರ ಪ್ರಶ್ನೆಗೆ ಉತ್ತರಿಸಿದ ಅವರು "ಅದೊಂದು ಗೌರವಾನ್ವಿತ ತಿಳುವಳಿಕೆಯಾದಲ್ಲಿ, ಅದರಲ್ಲಿ ತಪ್ಪೇನಿಲ್ಲ" ಎಂದು ನುಡಿದರು.
ಒಂದೊಮ್ಮೆ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಪಕ್ಷವು ಸಚಿವಖಾತೆಗಳನ್ನು ಪಡೆಯುವುದೇ ಎಂಬ ಪ್ರಶ್ನೆ ಎದುರಾದಾಗ "ಅಂತಹ ಪರಿಸ್ಥಿತಿ ಉದ್ಭವವಾದರೆ ನಾವು ಹಾಗೆ ಮಾಡಬಹುದು" ಎಂದರು. ಕಳೆದ ಬಾರಿ ಸಮಾಜವಾದಿ ಪಕ್ಷವು ಯುಪಿಎಗೆ ಬಾಹ್ಯ ಬೆಂಬಲ ಮಾತ್ರ ನೀಡಿತ್ತು.
ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ ಸಿಂಗ್ ಅವರೊಂದಿಗೆ ದೋಸ್ತಿ ಮಾಡಿಕೊಂಡಿರುವ ಕಾರಣ ಪಕ್ಷದ ಮುಸ್ಲಿಂ ಮತಬ್ಯಾಂಕು ಕುಸಿಯಲಿದೆಯೇ ಎಂಬ ಸುದ್ದಿಗಾರರು ಕೆದಕಿದಾಗ, "ಮುಸ್ಲಿಮರು ಅತ್ಯಂತ ಉತ್ಸಾಹದಿಂದ ಪಕ್ಷಕ್ಕೆ ಮತನೀಡುತ್ತಾ ಬಂದಿದ್ದಾರೆ. ಅಂತೆಯೇ ಈ ಹಂತದಲ್ಲೂ ಅವರು ಮಾಡಲಿದ್ದಾರೆ. ಅವರು ನಮಗೆ ವಿರೋಧವಾಗಿಲ್ಲ" ಎಂದು ರಾಮ್ ಗೋಪಾಲ್ ನುಡಿದರು. |