ಪತಿಯ ಸಾವಿನ ದುಃಖದಲ್ಲಿದ್ದ ಮಹಿಳೆಯನ್ನು ಆಕೆಯ ಪತಿಯ ಮನೆಯವರು ಮನೆಯಿಂದ ಹೊರತಳ್ಳಿದರು. ಅತ್ತ ಪತಿಯ ಸಾವಿನ ದುಃಖ, ಇತ್ತ ನಿರಾಶ್ರಿತಳಾದ ಮಹಿಳೆ ತವರಿಗೆ ನಡೆದಿದ್ದರು. ಎದೆಗುಂದದೆ ತನ್ನ ಹೆತ್ತವರ ಪ್ರೋತ್ಸಾಹದೊಂದಿಗೆ ವಿದ್ಯಾಭ್ಯಾಸ ಮುಂದುವರಿಸಿ ಉದ್ಯೋಗ ಪಡೆದು ತನ್ನಕಾಲಿನ ಮೇಲೆ ನಿಂತಿದ್ದರು.
ಇದು ನಡೆದದ್ದು 50 ವರ್ಷಗಳ ಹಿಂದೆ. ಈಗ ಅವರು ಕಾಲವಾಗಿದ್ದಾರೆ. ಅಂದು ಅವರನ್ನು ಮನೆಯಿಂದ ಹೊರ ಹಾಕಿದ್ದ ಗಂಡನ ಮನೆಯವರೇ ಇಂದು ಅವರ ಆಸ್ತಿಗಾಗಿ ಹೋರಾಡಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ನಾರಾಯಣಿ ದೇವಿ ಎಂಬ ಮಹಿಳೆ ತನ್ನ ಉಯಿಲು ಬರೆದಿಡದ ಕಾರಣ ಕಾನೂನು ಪ್ರಕಾರ ಆಕೆಯ ಆಸ್ತಿ ಪತಿಮನೆಯವರಿಗೆ ಲಭಿಸುವಂತಾಗಿದೆ.
ಇದರಿಂದಾಗಿ ಕರುಣೆ ಅಥವಾ ಭಾವಾತಿರೇಕಗಳು ಮಾತ್ರ ಪಕ್ಷಗಳ ಹಕ್ಕುಗಳ ನಿರ್ಧಾರದ ನಿರ್ಣಾಯಕ ಅಂಶಗಳಲ್ಲ, ಇಲ್ಲವಾದರೆ ಇವುಗಳು ಸ್ಪಷ್ಟ ಮತ್ತು ಗೊಂದಲ ರಹಿತವಾಗಿರಬೇಕು ಎಂಬುದು ಸ್ಪಷ್ಟ ಗೊಂಡಿರುವ ಸಿದ್ಧಾಂತ ಎಂದು ನ್ಯಾಯಲಯ ಹೇಳಿದೆ. ನಾರಾಯಣಿ ಅವರು ಮೃತ ಪತಿಯ ಸಹೋದರರು ಆಕೆಯ ಆಸ್ತಿಪಾಸ್ತಿಗೆ ಹಕ್ಕುದಾರರಲ್ಲ ಎಂಬುದಾಗಿ ನಾರಾಯಣಿ ಅವರ ಸಹೋದರ ಓಂ ಪ್ರಕಾಶ್ ಅವರ ವಾದವನ್ನು ವಜಾಗೊಳಿಸಿದ ವೇಳೆ ನ್ಯಾಯಾಲಯ ಈ ನಿರ್ಣಯ ಕೈಗೊಂಡಿದೆ.
1955ರಲ್ಲಿ ನಾರಾಯಣಿ ದೇವಿ ಅವರು ದೀನ್‌ದಯಾಳ್ ಶರ್ಮಾ ಅವರನ್ನು ವಿವಾಹವಾಗಿದ್ದರು. ಶರ್ಮಾ ಅವರ ಮರಣಾನಂತರ ತನ್ನ ಪತಿಮನೆಯನ್ನು ತೊರೆಯುವಂತೆ ಒತ್ತಾಯಿಸಲಾಗಿತ್ತು ಎಂದು ಹೇಳಲಾಗಿದ್ದು, ಅವರು ಬಳಿಕ ತನ್ನ ತವರಿಗೆ ತೆರಳಿದ್ದರು.
ಇದಾದ ಬಳಿಕ ಅವರೆಂದೂ ತನ್ನ ಪತಿ ಮನೆಗೆ ತೆರಳಿರಲಿಲ್ಲ. ಅವರು ತನ್ನ ವಿದ್ಯಾಭ್ಯಾಸ ಮುಂದುವರಿಸಿ ಉದ್ಯೋಗ ಹೊಂದಿ ಅಪಾರ ಆಸ್ತಿಪಾಸ್ತಿ ಸಂಪಾದಿಸಿದ್ದರು. ಮಕ್ಕಳಿಲ್ಲದ ಅವರು ಯಾವುದೇ ಉಯಿಲು ಬರೆದಿಟ್ಟಿರಲಿಲ್ಲ. |