ಹದಿನೈದನೇ ಲೋಕಸಭಾ ಚುನಾವಣೆಯ ನಾಲ್ಕನೆ ಹಂತದ ಮತದಾನ ಅಂತ್ಯಗೊಂಡಿದ್ದು, ಶೇ.57ರಷ್ಟು ಮತದಾನವಾಗಿದೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ. ದೆಹಲಿ ಸೇರಿದಂತೆ ನಾಲ್ಕನೆ ಹಂತದಲ್ಲಿ ಎಂಟು ರಾಜ್ಯಗಳ 85 ಕ್ಷೇತ್ರಗಳಿಗೆ ಚುನಾವಣೆ ನಡೆಸಲಾಗಿತ್ತು.
ಪಶ್ಚಿಮಬಂಗಾಳದಲ್ಲಿ ಶೇ.75ರಷ್ಟು ಗರಿಷ್ಠ ಮತದಾನ ದಾಖಲಾಗಿದ್ದರೆ, ಜಮ್ಮು ಕಾಶ್ಮೀರದಲ್ಲಿ ಶೇ.24 ರಷ್ಟು ಕನಿಷ್ಠ ಮತದಾನವಾಗಿದೆ. ಉಳಿದಂತೆ ಪಂಜಾಬ್ ಶೇ.65, ಹರ್ಯಾಣ ಶೇ.63, ರಾಜಸ್ಥಾನ ಶೇ.50, ಉತ್ತರಪ್ರದೇಶ ಶೇ.50 ಹಾಗೂ ದೆಹಲಿಯಲ್ಲಿ ಶೇ.50ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ರಾಜಸ್ಥಾನದ ಎಲ್ಲಾ 25, ಹಾಗೆಯೇ ಹರಿಯಾಣದ 10 ಮತ್ತು ದೆಹಲಿಯ ಎಲ್ಲಾ 7 ಸ್ಥಾನಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಇದಲ್ಲದೆ, ಬಿಹಾರದ 3, ಜಮ್ಮು ಕಾಶ್ಮೀರದ 1, ಪಂಜಾಬ್‌ನ 18, ಉತ್ತರ ಪ್ರದೇಶದ 18 ಹಾಗೂ ಪಶ್ಚಿಮ ಬಂಗಾಲದ 17 ಸ್ಥಾನಗಳಿಗೆ ಗುರುವಾರ ಚುನಾವಣೆ ನಡೆಯಿತು.
9.46 ಕೋಟಿ ಜನರು ತಮ್ಮ ಹಕ್ಕನ್ನು ಚಲಾಯಿಸುವ ಅರ್ಹತೆ ಪಡೆದಿದ್ದರು. 1.29 ಲಕ್ಷ ಮತಗಟ್ಟೆಗಳನ್ನು ರಚಿಸಲಾಗಿದ್ದು, ಸುಮಾರು 6 ಲಕ್ಷ ಜನರು ಮತದಾನ ಪ್ರಕ್ರಿಯೆ ನಿರ್ವಹಣೆಗೆ ಮುಂದಾಗಿದ್ದರು.
119 ಮಹಿಳೆಯರು ಸೇರಿದಂತೆ ಒಟ್ಟು 1,315 ಅಭ್ಯರ್ಥಿಗಳ ಅದೃಷ್ಟ ನಾಲ್ಕನೇ ಹಂತದಲ್ಲಿ ಚುನಾವಣೆಯಲ್ಲಿ ಮತಯಂತ್ರದೊಳಗೆ ಭದ್ರವಾಗಿದೆ.
ಇದೀಗ ನಾಲ್ಕನೆ ಹಂತ ಪೂರ್ಣಗೊಂಡಿದ್ದು, ಒಟ್ಟು 545 ಸ್ಥಾನಗಳಲ್ಲಿ 457 ಸ್ಥಾನಗಳಿಗೆ ಚುನಾವಣೆ ಪೂರ್ಣಗೊಂಡಿದೆ. ಲೋಕಸಭೆಯ 543 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಲಿದ್ದು, ಮಿಕ್ಕೆರಡು ಸ್ಥಾನಗಳಿಗೆ ಆಂಗ್ಲೋ ಇಂಡಿಯನ್ ಅಭ್ಯರ್ಥಿಗಳ ನಾಮನಿರ್ದೇಶನ ಮಾಡಲಾಗುವುದು. |