ಪೂಂಚ್‌ನಲ್ಲಿ ಇತ್ತೀಚೆಗೆ ಬಂಧನಕ್ಕೀಡಾಗಿರುವ ಲಷ್ಕರೆ-ಇ-ತೋಯ್ಬಾ ಸಂಘಟನೆಯ ಕಮಾಂಡರ್ ಒಬ್ಬನ ಬಳಿಯಿಂದ ಜಮ್ಮುಕಾಶ್ಮೀರ ಪೊಲೀಸರು ಪಾಕಿಸ್ತಾನ ಸಿಮ್ ಪತ್ತೆ ಮಾಡಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದಿಂದ ಅಕ್ರಮ ನುಸುಳುವಿಕೆ ಹೆಚ್ಚುತ್ತಿದೆ ಎಂಬ ಗುಪ್ತಚರ ಮಾಹಿತಿಗಳು ನಿಜವಾದಂತೆ ತೋರುತ್ತಿವೆ.
ಭಾರತದ ಗಡಿ ಪ್ರದೇಶದಲ್ಲಿ ಪಾಕಿಸ್ತಾನಿ ಮೊಬೈಲ್ ನೆಟ್‌ವರ್ಕ್‌ಗಳು ಸಂಪೂರ್ಣ ಸಕ್ರಿಯವಾಗಿದ್ದು, ಇವುಗಳು ಭಾರತೀಯ ನೆಟ್‌ವರ್ಕ್‌ಗಳಿಗಿಂತ ಉತ್ತಮವಾಗಿ ಕಾರ್ಯಾಚರಿಸುತ್ತಿವೆ ಎಂಬುದಾಗಿ ಪೊಲೀಸರು ಹೇಳುತ್ತಾರೆ. ಹಾಗಾಗಿ ಪಾಕಿಸ್ತಾನಿ ಸಿಗ್ನಲ್‌ಗಳು ಭಾರತೀಯ ಪ್ರಾಂತ್ಯದ 10ರಿಂದ 15 ಕಿಲೋಮೀಟರ್ ತನಕವೂ ವ್ಯಾಪಿಸಿವೆ ಎಂದೂ ಅವರು ತಿಳಿಸಿದ್ದಾರೆ.
ಉಗ್ರಗಾಮಿ ಸಂಘಟನೆಗಳು ತಮ್ಮ ಸಂಪರ್ಕಕ್ಕಾಗಿ ಪಾಕಿಸ್ತಾನಿ ದೂರವಾಣಿ ಸಂಪರ್ಕವನ್ನು ಅವಲಂಭಿಸಿವೆ ಎಂಬುದಕ್ಕೆ ಪ್ರಸಕ್ತ ಸಿಮ್ ವಶ ಸ್ಪಷ್ಟ ಪುರಾವೆಯಾಗಿದೆ ಎಂದು ಅವರು ಹೇಳಿದ್ದಾರೆ.
"ಅವರು (ಉಗ್ರರು) ಈ ಮೊದಲೆಲ್ಲ ಭಾರತೀಯ ಸಿಮ್ ಕಾರ್ಡ್‌ಗಳನ್ನು ಬಳಸುತ್ತಿದ್ದರು. ಇದೇ ಪ್ರಥಮ ಬಾರಿಗೆ ಅವರು ಪಾಕಿಸ್ತಾನಿ ಸಿಮ್ ಕಾರ್ಡ್‌ಗಳನ್ನು ಬಳಸಿರುವುದು ಪತ್ತೆಯಾಗಿದೆ ಎಂದು ಪೂಂಚ್ ಪೊಲೀಸ್ ವರಿಷ್ಠಾಧಿಕಾರಿ ತಾಹಿರ್ ಭಟ್ ತಿಳಿಸಿದ್ದಾರೆ. ಪಿಕೆ ಯುಫೋನ್, ಟೆಲೆನೋರ್, ಪಾಕ್ ಪಿಎಲ್, ವಾರಿಡ್ ಟೆಲ್ ಮತ್ತು ಪಾಕಿಸ್ತಾನದ ಟೆಲಿಕಾಂ ದೈತ್ಯ ಮೊಬಿಲಿಂಕ್ ಟೆಲಿಕಾಮ್ ಆಪರೇಟರ್‌ಗಳನ್ನು ಪತ್ತೆ ಮಾಡಲಾಗಿದೆ.
ಉಗ್ರರು ಈ ನೆಟ್‌ವರ್ಕ್‍ಗಳನ್ನು ಬಳಸುತ್ತಿರುವುದರಿಂದ ಅವರ ದಾಖಲೆಗಳನ್ನು ಪತ್ತೆ ಮಾಡುವುದು ಮತ್ತು ಉಗ್ರಗಾಮಿ ಸಂಘಟನೆಗಳ ನಡುವಿನ ಸಂಭಾಷಣೆಯನ್ನು ಪತ್ತೆ ಮಾಡುವುದು ಮತ್ತಷ್ಟು ಕಷ್ಟವಾಗುತ್ತಿದೆ ಎಂದು ಭದ್ರತಾ ಸಂಸ್ಥೆಗಳು ಹೇಳುತ್ತಿವೆ. ಈ ನೆಟ್‌ವರ್ಕ್‌ಗಳು ಜಮ್ಮು ಕಾಶ್ಮೀರದಿಂದ ಕರೆಗಳು ಹೊರಹೋಗಲು ಸೌಲಭ್ಯ ಒದಗಿಸುತ್ತದೆ. ಭಾರತೀಯ ಆಪರೇಟರ್‌ಗಳು ಈ ಸೇವೆಯನ್ನು ನಿಷೇಧಿಸಿದ್ದರೂ ಉಗ್ರರು ಈ ಮುಖಾಂತರ ಸೇವೆ ಪಡೆಯುತ್ತಿದ್ದಾರೆ.
ಸಿಗ್ನಲ್ ಶಕ್ತಿಯನ್ನು ಹೆಚ್ಚಿಸಲು ಪಾಕಿಸ್ತಾನವು ಗಡಿಯುದ್ದಕ್ಕೂ ಹೆಚ್ಚು ಟವರ್‌ಗಳನ್ನು ನಿರ್ಮಿಸುತ್ತಿದೆ ಎಂದು ಗೃಹಸಚಿವಾಲಯ ಈ ಹಿಂದೆಯೇ ಎಚ್ಚರಿಸಿತ್ತು. ಇದೀಗ ಸಿಮ್ ಪತ್ತೆಯು ಇಂತಹ ಬೆಳವಣಿಗಳನ್ನು ಗಡಿಯಾಚೆಗಿನ ಉಗ್ರರು ದುರ್ಬಳಕೆ ಮಾಡಿಕೊಂಡು ಭಾರತದ ಭದ್ರತೆಗೆ ಭಂಗಉಂಟುಮಾಡುತ್ತಾರೆ ಎಂಬುದು ಜ್ವಲಂತ ಉದಾಹರಣೆಯಾಗಿದೆ. |